ಐದು ನಿಮಿಷಕ್ಕೆ ಒಬ್ಬರಿಗಿಂತ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ದೇಶ ಎಂಬ ಕುಖ್ಯಾತಿ ಭಾರತದದ್ದು. ಕೌಟುಂಬಿಕ ಕಲಹ, ಪ್ರೇಮ ವೈಫಲ್ಯ, ಮಾನಸಿಕ ಸಮಸ್ಯೆ, ದೈಹಿಕ ಊನತೆ, ಸಾಲ, ರೈತರ ಸಮಸ್ಯೆಗಳು ಹೀಗೆ ಆತ್ಮಹತ್ಯೆಗೆ ಹಲವು ಕಾರಣಗಳು.
ಇದೀಗ ಬಂದಿರುವ ವರದಿಯೊಂದರ ಪ್ರಕಾರ ತಮಿಳುನಾಡಿನ ತಿರುಪುರದಲ್ಲಿ ಕೇವಲ ಎಂಟು ತಿಂಗಳ ಅವಧಿಯಲ್ಲಿ 405 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಘಾತ ಹುಟ್ಟಿಸುವ ಈ ಅಂಕಿ-ಅಂಶಗಳು ತಿರುಪುರ ತಮಿಳುನಾಡಿನ ಆತ್ಮಹತ್ಯೆಯ ರಾಜಧಾನಿ ಎಂದೆನಿಸಿಕೊಳ್ಳುವ ಭೀತಿಯನ್ನು ಹುಟ್ಟು ಹಾಕಿದೆ.
ದೇಶದ ಪ್ರಮುಖ ರಫ್ತು ಕೇಂದ್ರ ಎಂದು ಹೆಸರು ಮಾಡಿರುವ ತಿರುಪುರದಲ್ಲೀಗ ಆತ್ಮಹತ್ಯೆಗಳದ್ದೇ ಕಾರುಬಾರು. ಗಂಡ ಏನೋ ಹೇಳಿದನೆಂಬ ಕಾರಣಕ್ಕೆ, ಹೆಂಡತಿಯಿಂದ ಕಿರಿಕಿರಿ ಎಂಬ ಕಾರಣಕ್ಕೆ, ಕೆಲಸವಿಲ್ಲ ಎಂಬ ಕಾರಣಕ್ಕೆ ಹೀಗೆ ಆತ್ಮಹತ್ಯೆಗೆ ಸಿಗುವ ಕಾರಣಗಳು ನಗಣ್ಯವೆನಿಸುವಷ್ಟು ಆತ್ಮಹತ್ಯೆಗಳು ನಡೆಯುತ್ತಿವೆ.
23ರ ಹರೆಯದ ಗೌತಮಿ ಎಂಬ ಪುಟ್ಟ ಗಂಡು ಮಗುವೊಂದರ ತಾಯಿಯನ್ನೇ ತೆಗೆದುಕೊಳ್ಳಿ. ಆಕೆ ಮೊನ್ನೆ ಮೊನ್ನೆಯಷ್ಟೇ ಸೊಳ್ಳೆ ಬತ್ತಿಯನ್ನು ತಿಂದು ಸಾಯಲು ಯತ್ನಿಸಿದ್ದಾಳೆ. ನೀನು ಕೊಬ್ಬಿದ ಹಂದಿಯಂತೆ ಕಾಣುತ್ತಿದ್ದಿ ಎಂದು ಗಂಡ ಮೂದಲಿಸಿದ್ದೇ ಆಕೆಯ ಆತ್ಮಹತ್ಯಾ ಯತ್ನಕ್ಕೆ ಹೇತುವಾಗಿದೆ. ದಪ್ಪಗಿದ್ದಿ ಎಂದು ಆತ ದಿನಾ ಥಳಿಸುತ್ತಿದ್ದ ಎಂದೂ ಸಾವಿನ ದವಡೆಯಿಂದ ಮರಳಿರುವ ಗೌತಮಿ ಹೇಳುತ್ತಾಳೆ.
ಅಚ್ಚರಿಯೆಂದರೆ ಇವರದ್ದು ಪ್ರೇಮವಿವಾಹ. ಆಕೆಯ ಗಂಡ ಪ್ರಕಾಶ್ ಇಲ್ಲೇ ಚಿಲ್ಲರೆ ವ್ಯಾಪಾರ ಮಾಡಿಕೊಂಡಿದ್ದಾನೆ. ಇಂತಹ ಹತ್ತು ಹಲವು ಆತ್ಮಹತ್ಯಾ ಪ್ರಕರಣಗಳನ್ನು ತಿರುಪುರದ ಪೊಲೀಸ್ ಠಾಣೆಗಳು ದಿನಾ ನೋಡುತ್ತಿವೆ. ಅವರಲ್ಲಿ ಹೆಚ್ಚಿನವರದ್ದು ಪ್ರೇಮವಿವಾಹವಾಗಿರುತ್ತವೆ ಎಂಬ ಬಾಂಬನ್ನೂ ಪೊಲೀಸರು ಎಸೆದಿದ್ದಾರೆ.
ಕಳೆದ ತಿಂಗಳೊಂದರಲ್ಲೇ ತಿರುಪುರ ಜಿಲ್ಲೆಯಲ್ಲಿ 103 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವನೆ, ನೇಣು ಅಥವಾ ಬೆಂಕಿ ಹಚ್ಚಿಕೊಂಡು ಇವರು ಸತ್ತಿದ್ದಾರೆ.
ಈ ವರ್ಷದ ಸರಾಸರಿ ಲೆಕ್ಕ ಹಾಕಿದಾ ಪ್ರತಿ ತಿಂಗಳೂ 50 ಪುರುಷರು ಮತ್ತು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2010ರ ಮೊದಲ ಎಂಟು ತಿಂಗಳ ಅವಧಿಯನ್ನೇ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಇದುವರೆಗೆ 405 ಮಂದಿ ಸಾವಿಗೆ ಶರಣಾಗಿದ್ದಾರೆ. ಜೂನ್ ತಿಂಗಳಿಂದ ಆಗಸ್ಟ್ ನಡುವೆಯೇ 215 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುರುಷರು ಮತ್ತು ಮಹಿಳೆಯರು ಸೇರಿದಂತೆ 2009ರಲ್ಲಿ ಇಲ್ಲಿ ಒಟ್ಟು 482 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕರ್ನಾಟಕದ ಕಥೆಯೇನು? ಒಂದು ಅಂದಾಜಿನ ಪ್ರಕಾರ ದೇಶದ ಒಟ್ಟು ಆತ್ಮಹತ್ಯೆಯಲ್ಲಿ ಕರ್ನಾಟಕದ ಪಾಲು ಶೇ.22ಕ್ಕಿಂತಲೂ ಹೆಚ್ಚು. ಅಂದರೆ ಭಾರತದಲ್ಲಿನ 100 ಆತ್ಮಹತ್ಯೆಯಲ್ಲಿ ಕನಿಷ್ಠ 22 ಕರ್ನಾಟಕದ್ದಾಗಿರುತ್ತದೆ.
ಸರಕಾರವು ಬಿಡುಗಡೆ ಮಾಡಿರುವ ಪಟ್ಟಿಯೊಂದರ ಪ್ರಕಾರ 2006ರಲ್ಲಿ 75,702 ಪುರುಷರು ಮತ್ತು 42,410 ಮಹಿಳೆಯರೂ ಸೇರಿದಂತೆ ಒಟ್ಟು 1,18,112 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮತ್ತೊಂದು ವರದಿಯ ಪ್ರಕಾರ ಭಾರತದಲ್ಲಿ ಪ್ರತಿ 15 ನಿಮಿಷಕ್ಕೆ ಮೂರು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಓರ್ವ 15ರಿಂದ 29ರೊಳಗಿನ ವ್ಯಕ್ತಿಯಾಗಿರುತ್ತಾನೆ. ದೇಶದಲ್ಲೇ ಅತಿ ಹೆಚ್ಚಿನ ಆತ್ಮಹತ್ಯೆ ದಾಖಲಿಸುವ ರಾಜ್ಯ ಕೇರಳ, ನಂತರದ ಸ್ಥಾನ ಪಾಂಡಿಚೇರಿಯದ್ದು.
2002ರಲ್ಲಿ ತಮಿಳುನಾಡಿನಲ್ಲಿ 10,982, ಕೇರಳದಲ್ಲಿ 11,300, ಕರ್ನಾಟಕದಲ್ಲಿ 10,934 ಹಾಗೂ ಆಂಧ್ರಪ್ರದೇಶದಲ್ಲಿ 9,433 ಮಂದಿ ಸ್ವಇಚ್ಛೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.