ಪಾಲಕ್ಕಾಡ್, ಗುರುವಾರ, 23 ಸೆಪ್ಟೆಂಬರ್ 2010( 10:58 IST )
PR
ಮಾವುತನೊಬ್ಬ ನಿರಂತರವಾಗಿ ನೀಡುತ್ತಿದ್ದ ಹಿಂಸೆಯಿಂದ ಬೇಸತ್ತಿದ್ದ ಗಂಡಾನೆಯೊಂದು ತಿರುಗಿ ಬಿದ್ದು ಪುಂಡಾಟ ಆರಂಭಿಸಿದ ಪರಿಣಾಮ ಪಾಲಕ್ಕಾಡ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತಾದರೂ ಆನೆಯನ್ನು ನಿಯಂತ್ರಿಸಲು ವೈದ್ಯರು ಸೇರಿದಂತೆ ಯಾರೊಬ್ಬರಿಗೂ ಸಾಧ್ಯವಾಗಿರಲಿಲ್ಲ. ಆದರೆ ಅಚ್ಚರಿಯೆಂಬಂತೆ ಸಲಗ ಮಹಿಳೆಯೊಬ್ಬರ ಮಾತಿಗೆ ತಲೆದೂಗಿ ಸುಮ್ಮನಾಗಿದೆ.
ಇದು ನಡೆದಿರುವುದು ಕೇರಳದ ಪಾಲಕ್ಕಾಡ್‌ನಲ್ಲಿ. ಮಂಗಳವಾರ ಇಲ್ಲಿನ ಚಾತಪುರಂ - ಕಲ್ಪಾತಿ - ಶಿಕಾರಿಪುರಂ ಪ್ರದೇಶಗಳಲ್ಲಿ 'ಚತ್ತಾಪುರಂ ಬಾಬು' ಎಂಬ ಆನೆಯ ಪುಂಡಾಟದಿಂದ ಭೀತಿ ಸೃಷ್ಟಿಯಾಗಿತ್ತು. ರಸ್ತೆ-ಬೀದಿಗಳಲ್ಲಿ ತನ್ನ ಮಾವುತರು ಮತ್ತು ನಿಯಂತ್ರಿಸಲು ಬಂದ ಸಾರ್ವಜನಿಕರನ್ನು ಬಾಬು ಎರ್ರಾಬಿರ್ರಿಯಾಗಿ ಓಡಿಸಿದ್ದ.
ಆನೆ ಬಾಬುವನ್ನು ನಿಯಂತ್ರಿಸಲು ಈ ಹೊತ್ತಿನಲ್ಲಿ ಮಾವುತರು ನಡೆಸಿದ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದವು. ಎದುರಿಗೆ ಸಿಕ್ಕ ಮನೆಗಳು, ಗಿಡ-ಮರಗಳನ್ನು ಮುರಿದು ನೆಲಸಮ ಮಾಡುತ್ತಾ ಬಾಬು ಸಾಗುತ್ತಿದ್ದ. ಪಕ್ಕದ ಮರವೊಂದಕ್ಕೆ ಆನೆಯನ್ನು ಕಟ್ಟಿ ಹಾಕಲು ಸ್ಥಳೀಯರು ಯತ್ನಿಸಿದ್ದು ಕೂಡ ಫಲ ನೀಡಿರಲಿಲ್ಲ. ನಂತರ ಪಶುವೈದ್ಯರು ಸ್ಥಳಕ್ಕೆ ಆಗಮಿಸಿ ತನ್ನ ತಂತ್ರಗಳನ್ನು ಪ್ರಯೋಗಿಸಿದ್ದು ಕೂಡ ನೀರಿನಲ್ಲಿಟ್ಟ ಹೋಮದಂತಾಗಿತ್ತು.
ಆದರೆ ಆನೆಯ ಮಾಲಕಿ ಶ್ರೀದೇವಿ ನಡೆಸಿದ ಯತ್ನ ಫಲ ನೀಡಿತ್ತು. ಮದವೇರಿ ಗುರುಗುಟ್ಟುತ್ತಿದ್ದ ಬಾಬುವಿನತ್ತ ನಿಧಾನವಾಗಿ ಸಾಗಿದ ಶ್ರೀದೇವಿಯವರು ಬಾಳೆಹಣ್ಣು ಮತ್ತು ಬೆಲ್ಲವನ್ನು ನೀಡಿ ಸಮಾಧಾನ ಪಡಿಸಿದರು. ನಂತರ ಆನೆಯ ಅರಿವಿಗೆ ಬರದಂತೆ ಮರಕ್ಕೆ ಕಟ್ಟಿ ಹಾಕಿದರು.
ಸ್ಥಳೀಯರು ಹೇಳುವ ಪ್ರಕಾರ ಮಾವುತರಲ್ಲಿ ಓರ್ವ ಆನೆಗೆ ನಿರಂತರ ಶಿಕ್ಷೆ ನೀಡುತ್ತಿದ್ದ. ಮಂಗಳವಾರವೂ ಸಿಕ್ಕಾಪಟ್ಟೆ ಹೊಡೆದಿದ್ದ. ಇದರಿಂದ ಬಾಬು ಕೋಪೋದ್ರಿಕ್ತನಾಗಿದ್ದ.
ಇಡೀ ಭಾರತದಲ್ಲೇ ಅತಿ ಹೆಚ್ಚಿನ ಆನೆಗಳನ್ನು ಹೊಂದಿರುವ ರಾಜ್ಯ ಕೇರಳ. ಹಲವು ದೇವಸ್ಥಾನಗಳಲ್ಲಿ ಸೇರಿದಂತೆ ಕೆಲವು ಖಾಸಗಿ ವ್ಯಕ್ತಿಗಳು ಕೂಡ ಹವ್ಯಾಸ ಮತ್ತು ಮರದ ದಿಮ್ಮಿಗಳನ್ನು ಸಾಗಿಸಲು ಆನೆಗಳನ್ನು ಬಳಸುತ್ತಾರೆ.
ಕುಡಿತದ ಚಟವನ್ನು ಸಾಮಾನ್ಯವಾಗಿ ಅಂಟಿಸಿಕೊಂಡಿರುವ ಮಾವುತರು ತಮ್ಮ ಕೋಪವನ್ನು ಆನೆಯ ಮೇಲೆ ತೋರಿಸುವುದರಿಂದ ಕೆಲವೊಮ್ಮೆ ಕೆರಳುವುದಿದೆ. ಇಂತಹ ಕಾರಣಗಳಿಂದಾಗಿಯೇ ಆಗಾಗ ಆನೆಗಳು ಮಾವುತರನ್ನೇ ಕೊಂದು ಹಾಕಿದ ಪ್ರಕರಣಗಳು ನಡೆಯುತ್ತಿವೆ.