ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟಂತೆ ನಾಳೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಬಲ್ಕ್ ಎಸ್ಎಂಎಸ್ ಮತ್ತು ಎಂಎಂಎಸ್‌ಗಳ ಮೇಲೆ ಮೂರು ದಿನಗಳ ನಿಷೇಧ ಹೇರಿದೆ.
ಬುಧವಾರದಿಂದಲೇ ಅನ್ವಯವಾಗುವಂತೆ ದೇಶದಾದ್ಯಂತ ಈ ನಿಷೇಧ ಮೂರು ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಸರಕಾರ ತಿಳಿಸಿದೆ.
ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸಿದ ನಂತರ ಮುಂದಿನ 72 ಗಂಟೆಗಳ ಕಾಲ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ರೀತಿಯ ಬಲ್ಕ್ ಎಸ್ಎಂಎಸ್‌ಗಳು ಮತ್ತು ಎಂಎಂಎಸ್‌ಗಳ ಸೇವೆಗಳ ಮೇಲೆ ನಿಷೇಧ ಹೇರುವ ಆದೇಶವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲ್ಲಾ ಮೊಬೈಲ್ ಸೇವಾ ಪೂರೈಕೆದಾರರಿಗೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ವಿಶೇಷ ಪೀಠವು ಶುಕ್ರವಾರ ಅಪರಾಹ್ನ 3.30ಕ್ಕೆ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭದ್ರತೆಯ ಪರಿಶೀಲನೆಗಾಗಿ ಕರೆಯಲಾಗಿದ್ದ ಗೃಹ ಸಚಿವಾಲಯದ ಸಭೆಯಲ್ಲಿ ಇಂತಹ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ತೀರ್ಪು ಹೊರಬಿದ್ದ ನಂತರ ಸಮಾಜ ವಿರೋಧಿ ಶಕ್ತಿಗಳು ಸಮೂಹ ಎಸ್ಎಂಎಸ್‌ಗಳು ಮತ್ತು ಎಂಎಂಎಸ್‌ಗಳನ್ನು ಬಳಸಿಕೊಂಡು ವದಂತಿಗಳು ಮತ್ತು ಕೋಮುದ್ವೇಷ ಬಿತ್ತಬಹುದು ಎಂಬ ಭೀತಿಯಿಂದ ನಿಷೇಧ ನಿರ್ಧಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿಷೇಧ ಬುಧವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ ಎಂದು ಸರಕಾರ ತಿಳಿಸಿದ್ದು, ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಶಾಂತಿಯಿಂದ ತೀರ್ಪನ್ನು ಸ್ವೀಕರಿಸಬೇಕು ಎಂದು ಗೃಹ ಸಚಿವ ಪಿ. ಚಿದಂಬರಂ ಮನವಿ ಮಾಡಿದ್ದಾರೆ.