ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಚಾಲನೆ ಸಿಕ್ಕಿದೆ: ಕಾಂಗ್ರೆಸ್ (Kashmir | Congress | all-party delegation | UPA govt)
Bookmark and Share Feedback Print
 
ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಬಹುತೇಕ ಭದ್ರತಾ ಪಡೆಗಳ ಗುಂಡುಗಳಿಗೆ 100ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿರುವ ಮತ್ತು ಮುಂದುವರಿದಿರುವ ಹಿಂಸಾಚಾರವನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಕಾಶ್ಮೀರಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯಾಣದ ಆರಂಭದ ಸಂಕೇತವಾಗಿ ರಾಜ್ಯಕ್ಕೆ ಸರ್ವಪಕ್ಷಗಳ ನಿಯೋಗ ತೆರಳಿತ್ತು ಎಂದು ಕಾಂಗ್ರೆಸ್ ಹೇಳಿದೆ.

39 ಸದಸ್ಯರ ಸರ್ವಪಕ್ಷ ನಿಯೋಗವು ತನ್ನ ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದ ಸಂದರ್ಭದಲ್ಲಿ ವಿವಿಧ ಸ್ತರಗಳ ಸಾವಿರಕ್ಕೂ ಹೆಚ್ಚು ನಾಗರಿಕರು, ಪಕ್ಷಗಳ ಮುಖಂಡರು ಮುಂತಾದವರ ಜತೆ ಸಮಾಲೋಚನೆ ನಡೆಸಿದ್ದು, ನವದೆಹಲಿಗೆ ವಾಪಸ್ಸಾಗಿದೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಈ ಸಂಬಂಧ ಆರಂಭಿಸಿರುವ ಅಭಿಯಾನವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬೆಂಬಲಿಸುತ್ತಿದೆ ಎಂದೂ ಪಕ್ಷ ತಿಳಿಸಿದೆ.

ಸರ್ವಪಕ್ಷ ನಿಯೋಗದ ಭೇಟಿಯು ಫಲಿತಾಂಶವನ್ನು ಕೇಂದ್ರೀಕರಿಸಿಲ್ಲ. ಇದು ಪ್ರಯಾಣದ ಆರಂಭವಷ್ಟೇ. ಸಂಬಂಧಪಟ್ಟವರು ಧನಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದಲ್ಲಿ, ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸರ್ವಸಮ್ಮತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.

ಭಿನ್ನ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳು ಈ ರೀತಿಯಾಗ ಒಂದುಗೂಡಿ ರಾಜ್ಯದಲ್ಲಿನ ವಿವಿಧ ವರ್ಗಗಳ ಅಭಿಪ್ರಾಯಗಳನ್ನು ಪಡೆದಿರುವ ಆರಂಭವೇ ಮಹತ್ವದ್ದಾಗಿದೆ ಎಂದು ಸಿಂಘ್ವಿ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಕಾಶ್ಮೀರದ ಆಡಳಿತ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಮುಂದಿಟ್ಟಿರುವ ಸ್ವಾಯತ್ತತೆ ಬೇಡಿಕೆಯ ಕುರಿತು ಪ್ರಶ್ನಿಸಿದಾಗ, ನಮ್ಮ ಮುಂದೆ ಸ್ವಾಯತ್ತತೆಗೆ ಸಂಬಂಧಪಟ್ಟಂತೆ ವಿವಿಧ ಬಗೆಗಳಿರುವುದರಿಂದ ಈ ಪ್ರಸ್ತಾಪವನ್ನು ತಳ್ಳಿ ಹಾಕಲಾಗಿಲ್ಲ ಎಂದರು.

ಪ್ರವಾಸದ ಸಂದರ್ಭದಲ್ಲಿ ಎಲ್ಲಾ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ ಎಂದ ಮಾತ್ರಕ್ಕೆ ಅವೆಲ್ಲವನ್ನೂ ಸರಕಾರ ಸ್ವೀಕರಿಸುತ್ತದೆ ಎಂದರ್ಥವಲ್ಲ ಎಂದೂ ಸಿಂಘ್ವಿ ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ