ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿವಾಹ ವಿಚ್ಛೇದನ ಖರೀದಿ ವ್ಯವಹಾರವಲ್ಲ: ಸುಪ್ರೀಂ ಕೋರ್ಟ್
(Divorce | Supreme Court | Hindu Marriages Act | Sanjeeta Das)
ಪತಿ ಅಥವಾ ಪತ್ನಿ ತನ್ನ ವೈವಾಹಿಕ ಸಂಗಾತಿಗೆ ದೊಡ್ಡ ಮೊತ್ತದ ಹಣವನ್ನು ನೀಡಿ ವಿವಾಹ ವಿಚ್ಛೇದನವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯ, ಹಿಂದೂ ವಿವಾಹ ಕಾಯ್ದೆಯನ್ನು ಉಲ್ಲಂಘಿಸುವ ಯಾವುದೇ ಆದೇಶವನ್ನು ನ್ಯಾಯಾಲಯಗಳು ನೀಡಬಾರದು ಎಂದು ಹೇಳಿದೆ.
ಹಿಂದೂ ವಿವಾಹ ಕಾಯ್ದೆಯ 13ಬಿ ಪರಿಚ್ಛೇದದ ಅಡಿಯಲ್ಲಿ ಪರಸ್ಪರ ಒಪ್ಪಿಗೆ ಮತ್ತು ಸ್ಪಷ್ಟ ಕಾರಣಗಳು ಇಲ್ಲದ ಹೊರತಾಗಿ ವಿವಾಹವೊಂದನ್ನು ಮುಕ್ತಾಯಗೊಳಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲ ಮತ್ತು ಇದು ಹಿಂದೂ ವಿವಾಹ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ಹೇಳಿದೆ.
ಈ ಕಾನೂನು ವಿಚ್ಛೇದನಕ್ಕಾಗಿ ಯಾವುದೇ ಆದೇಶವನ್ನು ಖರೀದಿಸಲು ಪರಸ್ಪರ ಒಪ್ಪಿಗೆ ಇದ್ದು ಅಥವಾ ಇಲ್ಲದೆ ಅವಕಾಶ ನೀಡುವುದಿಲ್ಲ. ಇಲ್ಲಿ ಯಾವುದೇ ರೀತಿಯ ವ್ಯವಹಾರಕ್ಕೆ ಅವಕಾಶವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ಆರ್.ಎಂ. ಲೋಧಾ ನೇತೃತ್ವದ ಪೀಠವು ತೀರ್ಪು ನೀಡಿದೆ.
ತಾನು ಒಪ್ಪಿಗೆ ನೀಡದ ಹೊರತಾಗಿಯೂ ಗಂಡ ತಪನ್ ಕುಮಾರ್ ಮೊಹಾಂತಿ ತನಗೆ ವಿಚ್ಛೇದನ ನೀಡಲು ಕಲ್ಕತ್ತಾ ಹೈಕೋರ್ಟ್ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸಂಗೀತಾ ದಾಸ್ ಎಂಬವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ಅಪೆಕ್ಸ್ ಕೋರ್ಟ್, ಸಂಗೀತಾ ಅವರ ಮನವಿಯನ್ನು ಪುರಸ್ಕರಿಸಿದೆ. ಪತ್ನಿಯ ಕ್ರೂರತನವನ್ನು ಮುಂದಿಟ್ಟಿದ್ದ ಮೊಹಾಂತಿ, ತನಗೆ ವಿಚ್ಛೇದನ ಬೇಕು ಎಂದು ಮಾಡಿದ್ದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಈ ಹಿಂದೆ ತಳ್ಳಿ ಹಾಕಿತ್ತು.
ಕೌಟುಂಬಿಕ ನ್ಯಾಯಾಲಯವು ಮೊಹಾಂತಿಯವರ ಮನವಿಯನ್ನು ತಿರಸ್ಕರಿಸಿದ್ದ ಹೊರತಾಗಿಯೂ ಕಲ್ಕತ್ತಾ ಹೈಕೋರ್ಟ್ 2009ರ ಸೆಪ್ಟೆಂಬರ್ 2ರಂದು ವಿಚ್ಛೇದನ ನೀಡಿತ್ತು. ಪತ್ನಿಗೆ ತಾನು ಶಾಶ್ವತ ಜೀವನಾಂಶವಾಗಿ 10 ಲಕ್ಷ ರೂಪಾಯಿ ನೀಡಲು ಸಿದ್ಧ ಎಂದು ಮೊಹಾಂತಿ ನ್ಯಾಯಾಲಯದಲ್ಲಿ ಹೇಳಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಪತ್ನಿ ಸಂಗೀತಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.