ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಸಮಾಲೋಚನಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾಗಿರುವ ಅಂಶವಿದು. ಅದರ ಪ್ರಕಾರ ಭಾರತದ ಶಕ್ತಿಕೇಂದ್ರ ನವದೆಹಲಿಯ ಖಾನ್ ಮಾರ್ಕೆಟ್ ವಿಶ್ವದ 21ನೇ ಅತಿ ದುಬಾರಿ ಚಿಲ್ಲರೆ ವ್ಯಾಪಾರದ ಬೀದಿಯಂತೆ.
'2010ರ ವಿಶ್ವದಾದ್ಯಂತದ ಪ್ರಮುಖ ಬೀದಿಗಳು' ಎಂಬ ಸಮೀಕ್ಷೆಯಲ್ಲಿ ಕಂಡು ಬಂದಿರುವ ಮತ್ತೊಂದು ಪ್ರಮುಖ ವಿಚಾರವೆಂದರೆ ಕಳೆದ ವರ್ಷದ ಸಮೀಕ್ಷೆಯಲ್ಲಿ ಭಾರತ ಪಡೆದುಕೊಂಡಿದ್ದ 24ನೇ ಸ್ಥಾನದಿಂದ ಏರಿಕೆಯಾಗಿರುವುದು.
ಅದೇ ಹೊತ್ತಿಗೆ ನ್ಯೂಯಾರ್ಕ್‌ನ 'ಫಿಫ್ತ್ ಅವೆನ್ಯೂ' ವಿಶ್ವದ ದುಬಾರಿ ಖರೀದಿಯ ಬೀದಿಯೆಂಬ ಖ್ಯಾತಿಯನ್ನು ಉಳಿಸಿಕೊಂಡಿದೆ. ನಂತರದ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಹಾಂಕಾಂಗ್‌ನ ಕಾಸ್‌ವೇ, ಟೋಕಿಯೋದ ಗಿಂಜಾಗಳು ಸ್ಥಾನ ಪಡೆದಿವೆ.
ಲಂಡನ್, ಪ್ಯಾರಿಸ್ ಮತ್ತು ಮಿಲನ್‌ಗಳದ್ದು ನಾಲ್ಕು, ಐದು ಮತ್ತು ಆರನೇ ಸ್ಥಾನ. ವಿಶ್ವದಾದ್ಯಂತದ 59 ದೇಶಗಳ 269 ಅಂಗಡಿ ಮಳಿಗೆಗಳ ಪ್ರದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು.
ರಾಷ್ಟ್ರ ರಾಜಧಾನಿಯ ಖಾನ್ ಮಾರ್ಕೆಟ್ ಮುಂಬೈಯ ಬಾಂದ್ರಾದಲ್ಲಿನ 'ಲಿಂಕಿಂಗ್ ರೋಡ್' ಮತ್ತು ದೆಹಲಿಯ 'ಕಾನಾಟ್ ಪ್ಲೇಸ್' ಬೀದಿಗಳಿಗಿಂತಲೂ ದುಬಾರಿಯಾಗಿರುವುದು ವಿಶೇಷ.
ಬೆಂಗಳೂರು, ಚೆನ್ನೈ, ಪುಣೆ ಮತ್ತು ಅಹಮದಾಬಾದ್ ಸೇರಿದಂತೆ ಹಲವು ನಗರಗಳು ಕಳೆದ ವರ್ಷಕ್ಕಿಂತ ಹೆಚ್ಚು ಪ್ರಗತಿಯನ್ನು ದುಬಾರಿಯ ಹಾದಿಯಲ್ಲಿ ಕ್ರಮಿಸಿವೆ ಎಂದೂ ಸಮೀಕ್ಷೆ ನಡೆಸಿರುವ 'ಕಶ್ಮನ್ ಎಂಡ್ ವೇಕ್‌ಫೀಲ್ಡ್ ಇಂಡಿಯಾ' ಕಾರ್ಯ ನಿರ್ವಾಹಕ ನಿರ್ದೇಶಕ ಕೌಸ್ತವ್ ರಾಯ್ ತಿಳಿಸಿದ್ದಾರೆ.