ಜಲಪೈಗುರಿ, ಶುಕ್ರವಾರ, 24 ಸೆಪ್ಟೆಂಬರ್ 2010( 09:22 IST )
ಜಲಪೈಗುರಿ: ಪಶ್ಚಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯಲ್ಲಿ ಹಳಿ ದಾಟುತ್ತಿದ್ದ ಆನೆಗಳ ಹಿಂಡಿಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಏಳು ಆನೆಗಳು ಸ್ಥಳದಲ್ಲಿ ಮೃತಪಟ್ಟಿದ್ದು, ಎರಡು ಆನೆಗಳಿಗೆ ಗಂಭೀರ ಗಾಯವಾಗಿದೆ.
ಗೂಡ್ಸ್ ರೈಲು ವೇಗವಾಗಿ ಸಂಚರಿಸಿದ ಹಿನ್ನೆಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ರೈಲು ಅಪಘಾತವೊಂದರಲ್ಲಿ ಇಷ್ಟೊಂದು ಆನೆಗಳು ಸಾವೀಗೀಡಾಗುವುದು ದೇಶದಲ್ಲೇ ಇದೆ ಮೊದಲ ಬಾರಿಯಾಗಿದೆ.
ಆನೆಗಳ ಹಿಂಡು ಮರಾಘಾಟ್ ಅರಣ್ಯ ಪ್ರದೇಶದಿಂದ ಡಯಾನ ಅರಣ್ಯದೊಳಗೆ ಹೋಗುವ ಸಂದರ್ಭದಲ್ಲಿ ಗಂಟೆಗೆ 70 ಕೀ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಈ ಪ್ರದೇಶದಲ್ಲಿ 25 ಕೀ.ಮೀ. ವೇಗದಲ್ಲಿ ಚಲಿಸುವಂತೆ ನಿರ್ಬಂಧ ಹೇರಲಾಗಿತ್ತಾದರೂ ಇದನ್ನು ಉಲ್ಲಂಘಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕಳೆದೆರಡು ವರ್ಷಗಳಲ್ಲಿ ರೈಲು ಅಪಘಾತದಿಂದಲೇ 25 ಆನೆಗಳು ಸಾವೀಗೀಡಾಗಿವೆ. ಇದೀಗ ರೈಲ್ವೇ ವಿಭಾಗದ ವಿರುದ್ಧ ಕೇಸು ದಾಖಲಾಗಿಸಲು ಬಂಗಾಳ ಸರಕಾರ ಮುಂದಾಗಿದೆ. ಈ ಬಗ್ಗೆ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಬಟ್ಟಾಚಾರ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.