ನವದೆಹಲಿ, ಶುಕ್ರವಾರ, 24 ಸೆಪ್ಟೆಂಬರ್ 2010( 10:36 IST )
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗಾಂಧೀಜಿಯವರ ಹಾದಿಯಲ್ಲಿದ್ದರೇ? ಹಾಗೆಂದು ಜನಪ್ರಿಯ ಇತಿಹಾಸ ತಜ್ಞ ಬಿಪಿನ್ ಚಂದ್ರ ಹೇಳುತ್ತಿದ್ದಾರೆ. ಹುತಾತ್ಮ ಕ್ರಾಂತಿಕಾರಿಯ ಜೀವನಗಾಥೆ ಬರೆಯುತ್ತಿರುವ ಬಿಪಿನ್ ಪ್ರಕಾರ ಇದು ನಿಜ.
ಭಗತ್ ಸಿಂಗ್ ಬದುಕಿರುತ್ತಿದ್ದರೆ ಖಂಡಿತಾ ಅವರು ಮಾರ್ಕಿಸ್ಟ್ ಗಾಂಧಿವಾದಿಯಾಗುತ್ತಿದ್ದರು ಎಂದು ಇತ್ತೀಚೆಗಷ್ಟೇ ಬೀಜಿಂಗ್‌ನಲ್ಲಿ ಮಾತನಾಡುತ್ತಾ ಅಧ್ಯಯನಕಾರ ಅಭಿಪ್ರಾಯಪಟ್ಟಿದ್ದಾರೆ.
PR
23ರ ಹರೆಯದಲ್ಲೇ ಬ್ರಿಟೀಷರ ದೌರ್ಜನ್ಯಕ್ಕೆ ಬಲಿಯಾದ ಭಗತ್ ತನ್ನ ಯೋಚನೆಗಳಲ್ಲಿ ನಿರಂತರ ಪ್ರಗತಿ ಮತ್ತು ಅದನ್ನು ಅಳವಡಿಸಿಕೊಳ್ಳುವ ತತ್ವಗಳಿಗೆ ಹೊಂದಿಕೊಳ್ಳುತ್ತಿದ್ದರು ಎಂದು ಬಿಪಿನ್ ತಿಳಿಸಿದ್ದಾರೆ.
1907ರ ಸೆಪ್ಟೆಂಬರ್ 28ರಂದು ಪಂಜಾಬಿನಲ್ಲಿ ಜನಿಸಿದ್ದ ಮಹಾನ್ ಕ್ರಾಂತಿವೀರ ಭಗತ್ ಸಿಂಗ್ ತನ್ನ 23ನೇ ಹರೆಯದಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ್ದರು. ಭಗತ್ ಮತ್ತು ಅವರ ಜತೆಗಾರರಾದ ರಾಜಗುರು ಮತ್ತು ಸುಖದೇವ್ ಅವರಿಗೆ ಲಾಹೋರ್ ಷಡ್ಯಂತ್ರ ಪ್ರಕರಣದಲ್ಲಿ ಬ್ರಿಟೀಷ್ ಇಂಡಿಯಾ ಸರಕಾರವು ಮರಣ ದಂಡನೆ ವಿಧಿಸಿತ್ತು.
ಉಪ ಪೊಲೀಸ್ ವರಿಷ್ಠಾಧಿಕಾರಿಯ ಹತ್ಯೆಯಲ್ಲಿ ಪಾಲ್ಗೊಂಡಿರುವುದು, ಅಹಿಂಸಾ ಹೋರಾಟ ಮತ್ತು ಸೈಮನ್ ಆಯೋಗದ ಬಗ್ಗೆ ಗಾಂಧೀಜಿವರು ಹೊಂದಿದ್ದ ಅಭಿಪ್ರಾಯಗಳನ್ನು ಭಗತ್ ಸಿಂಗ್ ವಿರೋಧಿಸಿರುವ ಇತಿಹಾಸವನ್ನು ಓದಿದವರಿಗೆ ಬಿಪಿನ್ ಅವರ ದೃಷ್ಟಿಕೋನಗಳು ಅಚ್ಚರಿ ತರಿಸಿವೆ.
ಅಹಿಂಸೆಯನ್ನು ಹೊರತುಪಡಿಸಿದ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆದುಕೊಳ್ಳಬೇಕೆನ್ನುವ ತತ್ವಗಳು ಮತ್ತು ಈ ಕುರಿತು ಪ್ರಸಕ್ತ ಸಮಾಜದಲ್ಲಿ ಭಗತ್ ಸಿಂಗ್ ಹೊಂದಿರುವ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಇಮೇಜ್‌ಗೆ ಬಿಪಿನ್ ಅವರು ಬರೆಯುತ್ತಿರುವ ಜೀವನ ಚರಿತ್ರೆಯು ಧಕ್ಕೆಯನ್ನುಂಟು ಮಾಡಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
ಈ ಬಗ್ಗೆ ಸ್ವತಃ ಲೇಖಕರೇ ವಿವರಣೆ ನೀಡಿದ್ದಾರೆ. 'ಗಾಂಧೀಜಿಯವರ ಕೆಲವು ಅಭಿಪ್ರಾಯಗಳನ್ನು ಭಗತ್ ಸಿಂಗ್ ಅವರು ತೀವ್ರವಾಗಿ ವಿರೋಧಿಸಿದ್ದರೂ, ಮಹಾತ್ಮಾ ಅವರ ಬಗ್ಗೆ ಕ್ರಾಂತಿಕಾರಿ ಹೋರಾಟಗಾರನಿಗೆ ಶ್ರೇಷ್ಠ ಗೌರವಗಳಿದ್ದವು. ಅವರು ಮತ್ತಷ್ಟು ಕಾಲ ಬದುಕಲು ಸಾಧ್ಯವಾಗಿರುತ್ತಿದ್ದರೆ ಅವರ ಕೊನೆಯ ದಿನಗಳಲ್ಲಿ ಗಾಂಧೀಜಿವರ ಅಹಿಂಸಾ ತತ್ವ-ಸಿದ್ಧಾಂತಗಳ ಹೋರಾಟವನ್ನು ಸ್ವೀಕರಿಸುತ್ತಿದ್ದರು' ಎಂದು ಬಿಪಿನ್ ವಿವರಣೆ ನೀಡಿದ್ದಾರೆ.
ಭಗತ್ ಸಿಂಗ್ ಜೀವನ ಚರಿತ್ರೆ ಬರೆಯುತ್ತಿರುವ ಲೇಖಕರು ಪ್ರಸಕ್ತ ಅಧ್ಯಯನದಲ್ಲಿ ತೊಡಗಿದ್ದು, ಮುಂದಿನ ವರ್ಷವಷ್ಟೇ ಪುಸ್ತಕವನ್ನು ಅಂತಿಮಗೊಳಿಸಲಿದ್ದಾರೆ.
ಭಗತ್ ಸಿಂಗ್ ಅವರ ಕಾರಾಗೃಹದ ದಿನಚರಿ ಪುಸ್ತಕ, 1929ರ ವಿಚಾರಣಾ ನ್ಯಾಯಾಲಯದ ಅವರ ಹೇಳಿಕೆ, 'ನಾನೊಬ್ಬ ನಾಸ್ತಿಕ, ಯಾಕೆ?' ಎಂಬ ಅವರ ಕಿರುಹೊತ್ತಿಗೆಗಳಲ್ಲಿನ ವಿಚಾರಗಳನ್ನು ಅಧ್ಯಯನ ಮಾಡಿದಾಗ, ಅವರೊಬ್ಬ ಶ್ರೇಷ್ಠ ಚಿಂತನಾಶೀಲ ವ್ಯಕ್ತಿಯಾಗಿದ್ದರು ಮತ್ತು ಮಾರ್ಕಿಸ್ಟ್ ಗಾಂಧಿಯಾಗಿ ಬದಲಾಗುತ್ತಿದ್ದರು ಎಂಬುದು ಎದ್ದು ಕಾಣುತ್ತದೆ ಎಂದು ಬಿಪಿನ್ ತಿಳಿಸಿದ್ದಾರೆ.