ನವದೆಹಲಿ, ಶುಕ್ರವಾರ, 24 ಸೆಪ್ಟೆಂಬರ್ 2010( 11:13 IST )
ಅಯೋಧ್ಯೆಯಲ್ಲಿ ನಿರ್ಮಾಣವಾಗ ಬೇಕಾಗಿರುವುದು ರಾಮ ಜನ್ಮಭೂಮಿಯೋ ಅಥವಾ ಬಾಬ್ರಿ ಮಸೀದಿಯೋ? ಇಂತಹ ಪ್ರಶ್ನೆಗಳನ್ನು ಎತ್ತಿದರೆ ಪ್ರಜಾಪ್ರಭುತ್ವ ಮತ್ತು ಬಹುಪಕ್ಷೀಯ ಪದ್ಧತಿಯನ್ನು ಹೊಂದಿರುವ ಭಾರತದ ರಾಜಕೀಯ ಪಕ್ಷಗಳಿಂದ ಭಿನ್ನ ಉತ್ತರಗಳು ಬರುತ್ತವೆ.
ಬಿಜೆಪಿ, ಶಿವಸೇನೆಗಳಂತಹ ಪಕ್ಷಗಳು ರಾಮ ಮಂದಿರವೇ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿಯುತ್ತಿದ್ದರೆ, ಕಾಂಗ್ರೆಸ್ ಪ್ರೌಢತೆಯಿಂದ ವರ್ತಿಸುತ್ತಿದ್ದೇನೆ ಎಂಬಂತಹ ಮಾತುಗಳನ್ನು ಹೇಳುತ್ತಿದೆ.
ಅಯೋಧ್ಯೆ ಒಡೆತನ ಪ್ರಕರಣದ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ವಿಶೇಷ ಪೀಠವು ಇಂದು ನೀಡಬೇಕಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಸೆಪ್ಟೆಂಬರ್ 28ರಂದು ರಮೇಶ್ ಚಂದ್ರ ತ್ರಿಪಾಠಿಯವರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ತೀರ್ಪು ಮುಂದೂಡುವ ಕುರಿತು ಸ್ಪಷ್ಟ ನಿರ್ದೇಶನ ನೀಡಲಿದೆ.
ರಾಜಕೀಯ ಪಕ್ಷಗಳ, ಸಂಘಟನೆಗಳ ಒಲವು... ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ರಾಮಮಂದಿರ ಕಟ್ಟಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಬಯಸುತ್ತಿದೆ. ವಿವಾದಿತ ಸ್ಥಳದಲ್ಲಿ ಹಿಂದೂಗಳು ದೇವಳ ಕಟ್ಟಲು ಅವಕಾಶ ನೀಡಬೇಕು ಎಂದು ಇತ್ತೀಚೆಗಷ್ಟೇ ಆರೆಸ್ಸೆಸ್ ನಾಯಕ ಮೋಹನ್ ಭಾಗ್ವತ್ ಅವರು ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದರು.
ಬಿಜೆಪಿ ಕೂಡ ರಾಮಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವಾಗಬೇಕು ಎಂದು ವಾದಿಸುತ್ತಾ ಬಂದಿದೆ. ಆದರೆ ಪ್ರಸಕ್ತ ತುಟಿ ಬಿಚ್ಚಬಾರದು ಎಂದು ಪಕ್ಷದ ಎಲ್ಲಾ ನಾಯಕರಿಗೆ ಕೇಸರಿ ಪಾಳಯದ ವರಿಷ್ಠ ಎಲ್.ಕೆ. ಅಡ್ವಾಣಿಯವರು ಫರ್ಮಾನು ಹೊರಡಿಸಿರುವುದರಿಂದ ಯಾರೊಬ್ಬರೂ ಪ್ರತಿಕ್ರಿಯೆ ನೀಡುತ್ತಿಲ್ಲ.
ತನ್ನದು 'ಜಾತ್ಯತೀತ ತತ್ವ' ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ವಿವಾದಿತ ಸ್ಥಳದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂಬ ನಿಲುವಿಗೆ ಅಂಟಿಕೊಂಡಂತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸದ್ಯದ ಮಟ್ಟಿಗೆ ಇದೇ ಸೂಕ್ತ ಪರಿಹಾರ ಎನ್ನುವುದು ಸೋನಿಯಾ ಗಾಂಧಿಯವರ ನಾಯಕತ್ವದ ಪಕ್ಷದ ಅಭಿಪ್ರಾಯ.
ಆದರೆ ಉತ್ತರ ಪ್ರದೇಶದ ವಿರೋಧ ಪಕ್ಷ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರದ್ದು ಭಿನ್ನ ಹಾದಿ. ವಿವಾದಿತ ಸ್ಥಳದಲ್ಲಿ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸಬೇಕು ಎಂದು ಅವರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ.
ಮುಲಾಯಂ ಅವರಿಗೆ ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ್ ಯಾದವ್ ಅವರೂ ಬೆಂಬಲ ಸೂಚಿಸಿದ್ದಾರೆ. ಕರಸೇವಕರಿಂದ ಧ್ವಂಸಗೊಂಡಿರುವ ಮಸೀದಿ ಮತ್ತೆ ನಿರ್ಮಾಣವಾಗಬೇಕು ಎಂದು ತನ್ನ ನಿಲುವನ್ನು ಮಂಡಿಸುತ್ತಾ ಬಂದಿದ್ದಾರೆ.
ದಲಿತರನ್ನು ಓಲೈಸುತ್ತಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯೇ ತನ್ನ ಪ್ರಮುಖ ಆದ್ಯತೆ ಎಂದು ಹೇಳುತ್ತಿದ್ದಾರೆ. ಯಾವುದೇ ಒಂದು ವಾದಿಗಳ ಪರ ನಿಲ್ಲಲು ಅವರು ನಿರಾಕರಿಸಿದ್ದಾರೆ.
ತಡೆಯಾಜ್ಞೆಗೆ ಕಾಂಗ್ರೆಸ್ ಸ್ವಾಗತ... ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ವಾರಗಳ ಮಟ್ಟಿಗೆ ಮುಂದೂಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಕೇಂದ್ರದ ಆಡಳಿತ ಪಕ್ಷ ಕಾಂಗ್ರೆಸ್ ಸ್ವಾಗತಿಸಿದೆ.
ಸರ್ವೋಚ್ಚ ನ್ಯಾಯಾಲಯವು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಪರಸ್ಪರ ಮಾತುಕತೆ ಮತ್ತು ಹೊಂದಾಣಿಕೆಯ ಮೂಲಕ ಅಯೋಧ್ಯೆ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂಬ ವಾದವನ್ನು ಕಾಂಗ್ರೆಸ್ ಯಾವತ್ತೂ ಹೇಳಿಕೊಂಡು ಬಂದಿದೆ. ಇಂತಹ ಯತ್ನ ವಿಫಲವಾದಲ್ಲಿ ನಂತರ ನ್ಯಾಯಾಲಯದ ಮೂಲಕ ಯತ್ನಿಸಬಹುದಾಗಿದೆ ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದಾರೆ.
ತೀರ್ಪು ಬರುವವರೆಗೆ ಕಾಯ್ತೇವೆ: ಬಿಜೆಪಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಬಿಜೆಪಿ, ಅಲಹಾಬಾದ್ ಹೈಕೋರ್ಟ್ ತೀರ್ಪು ಬರುವವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದೆ.
ಹೈಕೋರ್ಟ್ ತೀರ್ಪು ಹೊರಗೆ ಬರಲಿ. ನಂತರ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಎಸ್ಎಂಎಸ್ ನಿಷೇಧ ವಿಸ್ತರಣೆ... ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆಯಾಜ್ಞೆ ನೀಡುತ್ತಿದ್ದಂತೆ ಬಲ್ಕ್ ಎಸ್ಎಂಎಸ್ ಮತ್ತು ಎಂಎಂಎಸ್‌ಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಸೆಪ್ಟೆಂಬರ್ 29ರ ವರೆಗೆ ಕೇಂದ್ರ ಸರಕಾರ ವಿಸ್ತರಿಸಿದೆ.
ಸಮಾಜ ವಿರೋಧಿ ಶಕ್ತಿಗಳು ಎಸ್ಎಂಎಸ್ ಮತ್ತು ಎಂಎಂಎಸ್ ಮೂಲಕ ಕೋಮು ಸೌಹಾರ್ದ ಕೆಡಿಸಲು ಯತ್ನಿಸಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಬಲ್ಕ್ ಸೇವೆಗಳ ಮೇಲೆ ಕೇಂದ್ರ ದೂರಸಂಪರ್ಕ ಸಚಿವಾಲಯವು ಸೆಪ್ಟೆಂಬರ್ 22ರ ರಾತ್ರಿಯಿಂದಲೇ ನಿಷೇಧ ಹೇರಿತ್ತು. ಅದನ್ನೀಗ ಸೆಪ್ಟೆಂಬರ್ 29ರವರೆಗೆ ವಿಸ್ತರಿಸಲಾಗಿದೆ.