ಮಹಾರಾಷ್ಟ್ರ ಕಂದಾಯ ಸಚಿವ ನಾರಾಯಣ ರಾಣೆಯವರ ಪುತ್ರ ನಿತೀಶ್ ರಾಣೆ ಎಂಬಾತ ತಾನೇ ನಡೆಸುತ್ತಿರುವ ಸಮಾಜ ಸೇವಾ ಸಂಘಟನೆಯೊಂದರ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
'ಸ್ವಾಭಿಮಾನ ಸಂಘಟನೆ' ಎಂಬ ಎನ್‌ಜಿಒ ಸದಸ್ಯ ಚಿಂಟು ಶೇಖ್ ಎಂಬವರ ಮೇಲೆ ಕಾಂಗ್ರೆಸ್ ರಾಜಕಾರಣಿಯ ಪುತ್ರ ನಿತೀಶ್ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಚಿಂಟು ಅವರ ದವಡೆಗೆ ಗಾಯವಾಗಿದೆ, ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊವೈ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅಶೋಕ್ ಜಾದವ್ ತಿಳಿಸಿದ್ದಾರೆ.
ಖಾರ್‌ನಲ್ಲಿನ ಸಂಘಟನೆಯ ಕಚೇರಿಗೆ ಬಲಿಪಶು ತೆರಳಿದ್ದ ವೇಳೆ ಮಾತಿನ ಚಕಮಕಿ ನಡೆಸಿದ್ದ ನಿತೀಶ್ ದಾಳಿ ಮಾಡಿದ್ದಾನೆ. ನಂತರ ಗಾಯಗೊಂಡ ಚಿಂಟು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಂಟು ಮತ್ತು ನಿತೀಶ್ ನಡುವೆ ಕೋರ್ಟ್ ವ್ಯಾಜ್ಯವೊಂದರ ಸಂಬಂಧ ತಾಕಲಾಟ ನಡೆಯುತ್ತಿತ್ತು. ಅದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ ಎಂದು ವರದಿಗಳು ಹೇಳಿವೆ.
ಚಿಂಟು ಹೇಳಿಕೊಂಡಿರುವ ಪ್ರಕಾರ, ಗುರುವಾರ ಅಪರಾಹ್ನ ರಾಣೆ ಕುಟುಂಬದ ಹುಟ್ಟುಹಬ್ಬವನ್ನು ಸ್ವಾಭಿಮಾನ್ ಸಂಘಟನೆ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಅದಕ್ಕೆ ನಾನು ಕೂಡ ಹೋಗಿದ್ದೆ. ಸ್ವಲ್ಪವೇ ಹೊತ್ತಿನಲ್ಲಿ ನಿತೀಶ್ ಕೂಡ ಬಂದ. ಅಷ್ಟರಲ್ಲಿ ನಿತೀಶ್ ಸಹಚರನೊಬ್ಬ ಕೋರ್ಟ್ ಕೇಸಿನ ಬಗ್ಗೆ ಆತನಿಗೆ ತಿಳಿಸಿದ್ದಾನೆ. ಇದರಿಂದ ಇದ್ದಕ್ಕಿದ್ದಂತೆ ತಾಳ್ಮೆ ಕಳೆದುಕೊಂಡ ನಿತೀಶ್ ನನ್ನ ಮೇಲೆ ಹಲ್ಲೆ ನಡೆಸುವಂತೆ ಹಿಂಬಾಲಕರಿಗೆ ಸೂಚನೆ ನೀಡಿದ. ಅದಾದ ಸ್ವಲ್ಪವೇ ಹೊತ್ತಿನಲ್ಲಿ ನನ್ನ ಮೇಲೆ ಗುಂಡು ಹಾರಿಸಿದ ಎಂದಿದ್ದಾರೆ.
ಆರೋಪಗಳನ್ನು ಸಚಿವರ ಪುತ್ರ ನಿತೀಶ್ ರಾಣೆ ತಳ್ಳಿ ಹಾಕಿದ್ದಾರೆ.
ಚಿಂಟು ನನ್ನ ಹೆಸರನ್ನು ವಿವಾದಕ್ಕೆ ವಿನಾ ಕಾರಣ ತರುತ್ತಿದ್ದಾನೆ. ಇದರಲ್ಲಿ ನನ್ನ ಪಾತ್ರ ಎಳ್ಳಷ್ಟೂ ಇಲ್ಲ. ನನ್ನ ಸಂಘಟನೆಗಾಗಿ ಕೆಲಸ ಮಾಡುವವನ ಮೇಲೆ ನಾನೇಕೆ ದಾಳಿ ಮಾಡಲಿ? ಆತ ಸಂಘಟನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ನನ್ನ ಮತ್ತು ನನ್ನ ಸಂಘಟನೆಯ ಹೆಸರು ಕೆಡಿಸುವುದರ ಹಿಂದೆ ಪಿತೂರಿಯಿದೆ ಎಂದು ನಿತೀಶ್ ಪ್ರತ್ಯಾರೋಪ ಮಾಡಿದ್ದಾನೆ.
ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯಲ್ಲಿ ಗುರುತಿಸಿಕೊಂಡಿದ್ದ ಚಿಂಟು ನಂತರ ಸ್ವಾಭಿಮಾನ ಸಂಘಟನೆಗೆ ಸೇರ್ಪಡೆಗೊಂಡಿದ್ದ.