ಅಳಪ್ಪುಲ, ಶುಕ್ರವಾರ, 24 ಸೆಪ್ಟೆಂಬರ್ 2010( 13:19 IST )
40ರ ಹರೆಯದ ತಾಯಿಯೊಬ್ಬಳು ತನ್ನ ಎಂಟು ತಿಂಗಳ ಪುಟ್ಟ ಮಗುವನ್ನು ವಾಷಿಂಗ್ ಮೆಷಿನ್‌ಗೆ ಹಾಕಿ ಕೊಂದಿರುವ ಘಟನೆ ಕೇರಳದಿಂದ ವರದಿಯಾಗಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಈಕೆ ನಂತರ ಪೊಲೀಸರಿಗೆ ಶರಣಾಗಿದ್ದಾಳೆ.
ಕೇರಳದ ಅಳಪ್ಪುಲದ ಚೇರ್ತಲ ಎಂಬಲ್ಲಿನ ಸುಮಾ ಎಂಬಾಕೆಯೇ ಆರೋಪಿ. ತನ್ನದೇ ಗಂಡು ಮಗುವನ್ನು ವಾಷಿಂಗ್ ಮೆಷಿನ್‌ಗೆ ಹಾಕಿ ಕೊಂದಿರುವುದಾಗಿ ಆಕೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಅಸ್ವಸ್ಥತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾ, ಮಗುವನ್ನು ಕೊಂದ ನಂತರ ಇಲ್ಲಿನ 'ಟೌನ್' ಪೊಲೀಸ್ ಠಾಣೆಯ ಮಹಿಳಾ ವಿಭಾಗದಲ್ಲಿ ಬಂದು ಶರಣಾಗಿದ್ದಾಳೆ.
ಗಂಡ ಜಾನ್ ಕೆಲಸಕ್ಕೆಂದು ಹೋಗಿದ್ದರು. ಶಾಲೆ ಬಿಟ್ಟು ಮನೆಗೆ ಬಂದಿದ್ದ ಮಗಳನ್ನು ಅಜ್ಜ-ಅಜ್ಜಿ ಮನೆಗೆ ತೆರಳುವಂತೆ ಸೂಚಿಸಿದೆ. ನಂತರ ಬಾಗಿಲು ಭದ್ರ ಮಾಡಿಕೊಂಡು ಮಗುವನ್ನು ವಾಷಿಂಗ್ ಮೆಷಿನ್‌ಗೆ ಹಾಕಿದೆ ಎಂದು ಸುಮಾ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾಳೆ.
ಸುಮಾ ಪೊಲೀಸ್ ಠಾಣೆಗೆ ಬಂದು ಶರಣಾದ ನಂತರ ಪೊಲೀಸರು ಬಾಗಿಲು ಒಡೆದು ಮನೆಗೆ ಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಗುವಿನ ಶವ ವಾಷಿಂಗ್ ಮೆಷಿನ್‌ನೊಳಗಿನ ನೀರಿನಲ್ಲಿ ತೇಲುತ್ತಿತ್ತು. ಅದನ್ನು ಹೊರತೆಗೆಯಲಾಗಿದೆ.
ನೆರೆಹೊರೆಯವರೊಂದಿಗೂ ಸುಮಾ ಉತ್ತಮ ಸಂಬಂಧ ಹೊಂದಿರಲಿಲ್ಲ. ಅಲ್ಲದೆ ಕೆಲ ತಿಂಗಳ ಹಿಂದೆ ಕೈಯ ನರಗಳನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಳು ಎಂಬ ವದಂತಿಗಳು ಇಲ್ಲಿ ಹರಡಿವೆ.
ವರದಿಗಳ ಪ್ರಕಾರ ಗಂಡ ಜಾನ್ ಜತೆಗೂ ಪದೇ ಪದೇ ಜಗಳ ಕಾಯುತ್ತಿದ್ದ ಸುಮಾ ದಾಂಪತ್ಯ ಜೀವನವೂ ಚೆನ್ನಾಗಿರಲಿಲ್ಲ. ಇದೇ ಕಾರಣದಿಂದಾಗಿ ತಾನು ಮಗುವನ್ನು ಕೊಂದಿದ್ದೇನೆ ಎಂದು ಸುಮಾ ತಿಳಿಸಿದ್ದಾಳೆ.