ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಲ್ಲಿರುವುದು ರಾಮ ಜನ್ಮಭೂಮಿ; ಇದು ಅಯೋಧ್ಯೆಯ ತೀರ್ಪು (Ayodhya verdict | Ram janmabhoomi | Hindu | Babri Masjid)
Bookmark and Share Feedback Print
 
ಅತ್ತ ಅಲಹಾಬಾದ್ ಹೈಕೋರ್ಟ್ ನೀಡಲಿರುವ ಅಯೋಧ್ಯೆ ಒಡೆತನದ ಕುರಿತ ತೀರ್ಪನ್ನು ತನ್ನ ಮುಂದಿನ ವಿಚಾರಣೆ ನಡೆಯಲಿರುವ ಸೆಪ್ಟೆಂಬರ್ 28ರವರೆಗೆ ಸುಪ್ರೀಂ ಕೋರ್ಟ್ ಮುಂದೂಡಿದೆ, ಆದರೆ ಇತ್ತ ಅಯೋಧ್ಯೆಯಲ್ಲಿ ಅಂತಹ ಯಾವುದೇ ಗೊಂದಲಗಳು ಕಾಣುತ್ತಿಲ್ಲ. ಈ ನಗರದ ಹಿಂದೂಗಳಿಗೆ ಹಿಂದೆಯೂ, ಮುಂದೆಯೂ ಅದು ರಾಮ ಜನ್ಮಭೂಮಿ!

ಅಯೋಧ್ಯೆಯ ವಿವಾದಿತ ಸ್ಥಳವು ವಿವಾದಿತವಾಗಿದ್ದರೂ, ಅಲ್ಲಿನ ಎಲ್ಲಾ ಬೋರ್ಡುಗಳು ದಾರಿ ತೋರಿಸುತ್ತಿರುವುದು 'ರಾಮ ಜನ್ಮಭೂಮಿ' ಎಂದು. ಇಲ್ಲಿನ ಹಿಂದೂ ನಿವಾಸಿಗಳಿಗೆ 'ಆ' ಸ್ಥಳದ ಬಗ್ಗೆ ಯಾವುದೇ ವಿವಾದಗಳು ಕಾಣಿಸದೆ, ಎಲ್ಲವೂ ಸ್ಪಷ್ಟವಾಗಿದೆ. ಅತ್ತ ಮುಸ್ಲಿಮರು ಹಿಂದೆ ನಡೆದ ದುರಂತ ಮತ್ತೊಮ್ಮೆ ನಡೆಯಬಾರದು ಎಂಬ ಮನೋಸ್ಥಿತಿಗೆ ಹೊಂದಿಕೊಂಡಿದ್ದಾರೆ.
PR

ಹೌದು, ಅಂಗಡಿ-ಮುಂಗಟ್ಟುಗಳ ಅಥವಾ ಅಧಿಕೃತ ಭಿತ್ತಿಪತ್ರಗಳು 'ರಾಮ ಜನ್ಮಭೂಮಿ' ಎಂದೇ ಬರೆದುಕೊಳ್ಳುತ್ತಿವೆ. ದಾರಿ ಎಲ್ಲೆಂದು ಹುಡುಕುವ ಪ್ರವಾಸಿಗರಿಗೆ ಟೀ-ಅಂಗಡಿಗಳು, ಪೊಲೀಸ್ ಚೌಕಿಗಳು ಅಥವಾ ವಿವಾದಿತ ಸ್ಥಳದ ಆಸು-ಪಾಸುಗಳು, ಅದು ರಾಮ ಜನ್ಮಭೂಮಿಯೆಂದೇ ಪ್ರತೀತಿ.

ಇದೆಲ್ಲ ಕಂಡು ಬಂದಿರುವುದು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ವರದಿಗಾರರಾದ ರುಕ್ಮಿಣಿ ಶ್ರೀನಿವಾಸನ್ ಮತ್ತು ಫರ್ವೇಜ್ ಇಕ್ಬಾಲ್ ಸಿದ್ಧಿಕಿಯವರು ಅಯೋಧ್ಯೆಯಲ್ಲಿ ತಮ್ಮ ಪಾದಗಳನ್ನು ಸವೆಸಿದಾಗ.

ಇಲ್ಲಿನ ಪ್ರಮುಖ ಮಾರುಕಟ್ಟೆಯಲ್ಲಿ 'ಶ್ರೀ ರಾಮಚಂದ್ರ ಕಿ ಸರ್ವೋತ್ತಮ್ ಸಾಮಗ್ರಿ' ಎಂಬ ಪೂಜಾ ಸಾಮಗ್ರಿಯ ಅಂಗಡಿಯನ್ನಿಟ್ಟುಕೊಂಡಿರುವ ಪುರುಷೋತ್ತಮ್ ಕುಮಾರ್ ಅವರ ಮಾತುಗಳಲ್ಲೇ ಕೇಳಿ -- 'ಪ್ರತಿಯೊಬ್ಬರೂ ರಾಮ ಜನ್ಮಭೂಮಿ ಎಂದು ಕರೆಯುತ್ತಿರುವುದು ಮುಖ್ಯವಲ್ಲ, ಇಲ್ಲಿ ಪ್ರಮುಖ ಅಂಶವಾಗಿರುವುದು ಇದು ರಾಮ ಜನ್ಮಭೂಮಿಯೇ ಆಗಿರುವುದು' ಎನ್ನುತ್ತಾರವರು.

1992ರಲ್ಲಿ ಕರಸೇವಕರು ತಲೆಗೆ ಕಟ್ಟಿಕೊಂಡಿದ್ದ ಕೇಸರಿ ಪಟ್ಟಿ, ಪ್ರಾರ್ಥನೆಗೆ ಬಳಸುವ ಮಣಿದಾರಗಳು, ಕೇಸರಿ ಉತ್ತರೀಯಗಳು ಹೀಗೆ ಎಲ್ಲವೂ ಪುರುಷೋತ್ತಮ್ ಅವರ ಅಂಗಡಿಯಲ್ಲಿ ಲಭ್ಯ.

ಇಲ್ಲಿ ಹೇಳಲೇಬೇಕಾದ ಮತ್ತೊಂದು ವಿಚಾರವೆಂದರೆ ಇವರು ಇದ್ದಕ್ಕಿದ್ದಂತೆ ಇಲ್ಲಿ ಅಂಗಡಿ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿರುವುದಲ್ಲ ಎನ್ನುವುದು. ಕಳೆದ ಐದು ಪೀಳಿಗೆಗಳಿಂದ ಅವರ ಹಿರಿಯರು ಇದನ್ನೇ ಮಾಡಿಕೊಂಡು ಬಂದಿದ್ದಾರಂತೆ. ಅಲ್ಲದೆ ಇಲ್ಲಿ ರಾಮಮಂದಿರವಿತ್ತು ಮತ್ತು ಇದು ರಾಮ ಹುಟ್ಟಿದ ಸ್ಥಳವೆಂದೇ ಹಿರಿಯರು ಗುರುತಿಸುತ್ತಾ ಬಂದಿದ್ದಾರೆ.

ಈ ಬಗ್ಗೆ ಮಾತಿಗಿಳಿಯುವ ಅವರು, 'ನ್ಯಾಯಾಲಯ ನೀಡುವ ತೀರ್ಪು ಯಾವ ಬದಲಾವಣೆಯನ್ನು ತರುತ್ತದೆ? ಏನೂ ಇಲ್ಲ' ಎನ್ನುತ್ತಾ, 'ಇದೇ ರಾಮ ಜನ್ಮಭೂಮಿ ಮತ್ತು ಇಲ್ಲಲ್ಲದೆ ಬೇರೆ ಕಡೆ ಅದಿರಲು ಸಾಧ್ಯವೇ ಇಲ್ಲ ಎನ್ನುವುದು ಪ್ರತಿಯೊಬ್ಬ ಹಿಂದೂವಿನ ಹೃದಯಕ್ಕೆ ತಿಳಿದಿರುತ್ತದೆ' ಅಂತಾರೆ.

ಇಷ್ಟೆಲ್ಲ ಪ್ರಕ್ಷುಬ್ಧತೆಗಳ ನಡುವೆಯೂ ಗುಜರಾತಿನ ಮಹಿಳೆಯರ ತಂಡವೊಂದು ಅಯೋಧ್ಯೆಗೆ ಬಂದಿತ್ತು. ಈ ತಂಡವು ಇಲ್ಲಿಂದ ನೇಪಾಳಕ್ಕೆ ತೆರಳುವುದರಲ್ಲಿತ್ತು. 'ನಾವು ರಾಮ ದರ್ಶನಕ್ಕೆಂದು ಬಂದಿದ್ದೇವೆ. ಇಲ್ಲೇ ಪಕ್ಕದಲ್ಲಿ ಮಸೀದಿಯೊಂದಿತ್ತು, ಆದರೆ ತುಂಬಾ ಹಿಂದೆಯೇ ಅದು ಹೋಗಿದೆ' ಎಂದು ಪ್ರವಾಸಿಯಲ್ಲೊಬ್ಬರಾದ ರಾಜ್‌ಕೋಟ್‍‌ನ ಸುಶೀಲಾಬೆನ್ ಕನೋಜಿಯಾ ಹೇಳುತ್ತಾರೆ.

ಭಾರೀ ಭದ್ರತೆ, ತಪಾಸಣೆಗಳನ್ನು ಎದುರಿಸಿದ ನಂತರ ಒಳಗೆ ಹೋದಾಗ ಅಲ್ಲೊಂದು ಚಕ್ರವ್ಯೂಹ ಎದುರಾದ ಅನುಭವ ಎದುರಾಗುತ್ತದೆ. ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಭರತ ಮೂರ್ತಿಗಳನ್ನು ಇಡಲಾಗಿರುವ 10 ಅಡಿ ದೂರದಿಂದ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಳ್ಳಲು ಮಾತ್ರ ಅವಕಾಶವಿದೆ. ಭಕ್ತರು ಮತ್ತು ಅಲ್ಲಿರುವ ವಿಗ್ರಹಗಳನ್ನು ಬೇರ್ಪಡಿಸುವುದು ಮುಳ್ಳಿನ ಬೇಲಿ. 'ಇಲ್ಲಿ ಹೆಚ್ಚು ಹೊತ್ತು ಕಳೆಯಬೇಡಿ' ಎಂಬ ಒಂದು ಬೋರ್ಡ್ ಕೂಡ ನಮ್ಮನ್ನು ಎಚ್ಚರಿಸಿ ಬಿಡುತ್ತದೆ.

ಇದನ್ನೇ ಗರ್ಭಗುಡಿ ಎಂದು ಪರಿಗಣಿಸಲಾಗಿದೆ. ಆದರೆ ಈ ಗರ್ಭಗುಡಿಗೆ ಇರುವ ಹೊದಿಕೆಯೆಂದರೆ ಟೆಂಟ್ ಮಾತ್ರ. ಇಲ್ಲೇ ಈ ಹಿಂದೆ ಬಾಬ್ರಿ ಮಸೀದಿಯಿತ್ತು. ಆದರೆ ಈಗ ಅಲ್ಲಿ ಮಸೀದಿ ಬಿಡಿ, ಅದರ ಕುರುಹುಗಳು ಕೂಡ ಕಾಣಿಸುತ್ತಿಲ್ಲ. ಅಲ್ಲದೆ ಯಾವೊಬ್ಬ ಮುಸ್ಲಿಂ ಅನುಯಾಯಿಗಳು ಕೂಡ ಇಲ್ಲಿಗೆ ಬರುತ್ತಿಲ್ಲ.

ಪತ್ರಿಕಾ ವರದಿಗಾರರು ಅಯೋಧ್ಯೆಯಲ್ಲಿ ಇಡೀ ದಿನ ಕಂಡ ಅಥವಾ ಕೇಳಿದ ಬಾಬ್ರಿ ಎಂಬ ಶಬ್ದವೆಂದರೆ 90ರ ಹರೆಯದ, ಬಹುತೇಕ ಯಾಂತ್ರಿಕ ಸಹಾಯದಿಂದ ಹೊರಜಗತ್ತಿನ ಧ್ವನಿಗಳನ್ನು ಕೇಳುತ್ತಿರುವ ವೃದ್ಧ ಉಳಿದುಕೊಂಡಿರುವ ಎರಡು ಕೊಠಡಿಗಳ ಮನೆಯಲ್ಲಿ. 'ಬಾಬ್ರಿ ಮಸೀದಿ ಮರುನಿರ್ಮಾಣ ಸಮಿತಿ' ಎಂದು ಕೈಯಲ್ಲೇ ಬರೆದ ಬೋರ್ಡೊಂದು ಮೊಹಮ್ಮದ್ ಹಶೀಮ್ ಅನ್ಸಾರಿಯವರ ಮನೆಯಲ್ಲಿ ಕಾಣ ಸಿಗುತ್ತದೆ.

ಪ್ರಸಕ್ತ ವಿವಾದದಲ್ಲಿರುವ ಒಡೆತನ ದಾವೆಯಲ್ಲಿ ಇವರೂ ಒಬ್ಬರು ವಾದಿ. ಅಚ್ಚರಿಯೆಂದರೆ ಈ ಹಿಂದೆ ಇವರಂತೆಯೇ ಐದು ಮಂದಿ ವಾದಿಗಳಾಗಿದ್ದವರು ಈಗ ಬದುಕುಳಿದಿಲ್ಲ. ತಾನು ಕೊನೆಯುಸಿರೆಳೆಯುವುದರೊಳಗಾದರೂ ತೀರ್ಪನ್ನು ಕಿವಿ ತುಂಬಿಕೊಳ್ಳಬೇಕೆಂಬುದು ಅನ್ಸಾರಿಯವರ ಬಯಕೆ.

ಕೊನೆಯ ಪಕ್ಷ ನನ್ನ ಜೀವಿತಾವಧಿಯಲ್ಲಾದರೂ ತೀರ್ಪು ಬರಲಿ. ಅಯೋಧ್ಯೆಯ ಎಲ್ಲಾ ಮುಸ್ಲಿಮರು ಅದಕ್ಕಾಗಿ ಕಾಯುತ್ತಿದ್ದಾರೆ ಎನ್ನುತ್ತಾರವರು.

ಬಳೆ ಮಾರಾಟಗಾರ ಮೊಹಮ್ಮದ್ ಆರಿಫ್ ಅವರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಇಲ್ಲಿನ ಹಳೆಯ ನಗರದಲ್ಲಿ ವಾಸಿಸುತ್ತಿದೆ. 'ಮಸೀದಿಯನ್ನು ಧ್ವಂಸ ಮಾಡುವಾಗ ನಾನು ಇಲ್ಲೇ ಇದ್ದೆ. ಅದೇ ಕಾರಣದಿಂದ ಈ ನಗರ ಹೊತ್ತಿ ಉರಿಯುವುದನ್ನೂ ನಾನು ನೋಡಿದ್ದೇನೆ' ಎಂದು ಯಾವುದೇ ಉದ್ವೇಗವಿಲ್ಲದೆ ಆರಿಫ್ ವಿವರಿಸುತ್ತಾರೆ.

ಇಲ್ಲಿ ಏನು ನಡೆದಿತ್ತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅದು ಟಿವಿಗಳಲ್ಲೂ ಬಂದಿತ್ತು. ನಾವು ಸಮಸ್ಯೆಯನ್ನು ಎಳೆದುಕೊಳ್ಳಲು ಬಯಸುವುದಿಲ್ಲ. ಈ ಪ್ರದೇಶವನ್ನು ಬಾಬ್ರಿ ಎಂದು ಗುರುತಿಸಲು ಸಾಧ್ಯವಾಗದೇ ಇದ್ದರೆ, ತೊಂದರೆಯಿಲ್ಲ ಬಿಡಿ. ಅವರು ಬಯಸಿದರೆ ಚರ್ಚನ್ನೇ ಕಟ್ಟಬಹುದು, ನಾನು ಈ ಕುರಿತು ತಲೆ ಕೆಡಿಸಿಕೊಂಡಿಲ್ಲ ಎಂದು ಕೋರ್ಟ್ ತೀರ್ಪಿನ ಕುರಿತು ಹೆಚ್ಚು ಆಸಕ್ತಿ ತೊರದೆ ಹೇಳುತ್ತಾರೆ.

ಆರಿಫ್ ಹೀಗೆ ಹೇಳುತ್ತಿದ್ದರೆ ಅವರ ಹದಿಹರೆಯದ ಪುತ್ರಿ ಸಾಯಿರಾ ಟಿವಿ ಮುಂದೆ ಯಾವ ಸುದ್ದಿ ಬಿತ್ತರವಾಗುತ್ತಿದೆ ಎಂದು ನೋಡುತ್ತಿದ್ದಾಳೆ-- ಅಯೋಧ್ಯೆಯಲ್ಲಿ ಮತ್ತೆ ಏನು ನಡೆಯಲಿದೆ ಎನ್ನುವುದಷ್ಟೇ ಉಳಿದಿರುವ ಕುತೂಹಲದೊಂದಿಗೆ.
ಸಂಬಂಧಿತ ಮಾಹಿತಿ ಹುಡುಕಿ