ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಡ್ವಾಣಿ ರಥಯಾತ್ರೆಗೆ 20 ವರ್ಷ; ಸೋಮನಾಥಕ್ಕೆ ಭೇಟಿ (BJP | LK Advani | Ram temple | Somnath Temple)
Bookmark and Share Feedback Print
 
ಐತಿಹಾಸಿಕ ಸೋಮನಾಥ ಮಂದಿರದಿಂದ ಅಯೋಧ್ಯೆಗೆ ರಥಯಾತ್ರೆ ಮಾಡುವ ಮೂಲಕ ಹಿಂದೂಗಳಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರ ಮೈಲುಗಲ್ಲಿಗೆ ಇಂದು 20ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರು ಇಂದು ಬೆಳಿಗ್ಗೆ ಗುಜರಾತಿನ ಸೋಮನಾಥ ದೇವಳಕ್ಕೆ ಭೇಟಿ ನೀಡಿದರು.
PR

ಸೋಮನಾಥನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಕೇಸರಿ ಪಕ್ಷದ ನಾಯಕ, ತಾನು ಕೈಗೊಂಡ ಅಯೋಧ್ಯಾ ರಥಯಾತ್ರೆಯು ಭಾರತದ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು ಎಂದರು. ಅಲ್ಲದೆ ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂದರು.

ರಥಯಾತ್ರೆಯ 20ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ಸೋಮನಾಥ ಮಂದಿರಕ್ಕೆ ತೆರಳಿದ್ದ ಅಡ್ವಾಣಿಯವರಿಗೆ ಬಿಜೆಪಿಯ ಮಾಜಿ 'ಬೆಂಕಿಯ ಚೆಂಡು' ಉಮಾಭಾರತಿಯವರು ಕೂಡ ಸಾಥ್ ನೀಡಿದ್ದಾರೆ.

1990ರ ಸೆಪ್ಟೆಂಬರ್ 25ರಂದು ಸೋಮನಾಥ ಮಂದಿರದಿಂದ ಅಡ್ವಾಣಿಯವರ ರಥಯಾತ್ರೆಗೆ ಚಾಲನೆ ನೀಡಲಾಗಿತ್ತು. ದೇಶದಾದ್ಯಂತ 10,000 ಕಿಲೋ ಮೀಟರ್ ಕ್ರಮಿಸಿದ್ದ ರಥಯಾತ್ರೆಯು ಅದೇ ವರ್ಷದ ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ಸಮಾಪ್ತಿಗೊಂಡಿತ್ತು. ಆ ನಂತರ ಪ್ರತಿ ವರ್ಷವೂ ಅವರು ಮಂದಿರಕ್ಕೆ ಭೇಟಿ ನೀಡುತ್ತಾ ಬಂದಿದ್ದಾರೆ.

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲು ಹಿಂದೂಗಳ ಬೆಂಬಲ ಪಡೆಯಲು ಈ ರಥಯಾತ್ರೆಗೆ ಅಡ್ವಾಣಿಯವರು ಮುಂದಾಗಿದ್ದರು. ಇದು ಹಿಂದೂ ಯುವ ಜನತೆಯ ಮೇಲೆ ಅಪಾರ ಪ್ರಭಾವ ಬೀರಿತ್ತು.

ಈ ರಥಯಾತ್ರೆಯ ಕಾರಣದಿಂದಾಗಿಯೇ ಕೇಸರಿ ಪಕ್ಷವು ದೇಶದ ಎರಡನೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿತ್ತು ಎಂದರೂ ಅತಿಶಯೋಕ್ತಿಯಲ್ಲ. ರಥಯಾತ್ರೆಯ ಬಳಿಕ ಬಿಜೆಪಿಯ ಪ್ರತಿನಿಧಿಗಳ ಸಂಖ್ಯೆ ಒಮ್ಮಿಂದೊಮ್ಮೆಲೇ ಏರಿಕೆಯಾಗಿದ್ದುದೇ ಇದಕ್ಕೆ ಸಾಕ್ಷಿ.

ಅಡ್ವಾಣಿಯವರ ಭೇಟಿ ಹಿನ್ನೆಲೆಯಲ್ಲಿ ಸೋಮನಾಥ ಮಂದಿರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿತ್ತು. ಸುಮಾರು 260 ಪೊಲೀಸ್ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ