ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 21ರ ಕಾಲೇಜು ವಿದ್ಯಾರ್ಥಿನಿಯೇ ಕಳ್ಳರ ಗ್ಯಾಂಗ್ ಲೀಡರ್! (Delhi University | Mansi Bhatt | Ghaziabad | gang of burglars)
Bookmark and Share Feedback Print
 
ಮಾನ್ಸಿ ಭಟ್ ಎಂಬ ಈ ಮಾಯಾಂಗನೆಯ ವಯಸ್ಸು ಕೇವಲ 21. ದೆಹಲಿ ವಿಶ್ವವಿದ್ಯಾಲಯದ ಬಿಕಾಂ ವಿದ್ಯಾರ್ಥಿನಿ. ಮೊದಲ ನೋಟಕ್ಕೆ ಎಂಥವರನ್ನೂ ಕೆಡವಿ ಬಿಡುವ ಮೋಹಿನಿ. ಈಕೆ ಒಂದು ಅಂತಾರಾಜ್ಯ ಚೋರರ ಗ್ಯಾಂಗ್ ಕಟ್ಟಿಕೊಂಡು ಎರಡು ಕೋಟಿ ರೂಪಾಯಿಗಳಿಗೂ ಅಧಿಕ ಸಂಪಾದನೆ ಮಾಡಿದ್ದಾಳೆ ಎಂದರೆ ಯಾರೊಬ್ಬರೂ ನಂಬುತ್ತಿಲ್ಲ.

ಆದರೆ ವಿಷಯ ಸತ್ಯ. ಸಪ್ತ ಚೋರರ ಗ್ಯಾಂಗಿಗೆ ಈಕೆಯೇ ಮುಖ್ಯಸ್ಥೆ. ಈಕೆಯ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾಕಷ್ಟು ಕಳ್ಳತನಗಳನ್ನು ನಡೆಸಲಾಗಿದೆ. ಚಿನ್ನ, ವಜ್ರ, ಬೆಲೆ ಬಾಳುವ ಮೊಬೈಲುಗಳು ಮುಂತಾದುವುಗಳಿಗೆ ಕನ್ನ ಹಾಕುವ ತಂಡವಿದು.
PR

ಕೊನೆಗೂ ಸಿಕ್ಕಿಬಿದ್ದದ್ದು ತಮ್ಮ ಹಾದಿಯಲ್ಲಿ ಎಡವಿದ ಕಾರಣದಿಂದಾಗಿ. ಲಪಟಾಯಿಸಲಾಗಿದ್ದ ಮೊಬೈಲೊಂದನ್ನು ಬಳಕೆ ಮಾಡುತ್ತಿದ್ದುದನ್ನು ಟ್ರ್ಯಾಕ್ ಮಾಡಿ ಪೊಲೀಸರು ಗ್ಯಾಂಗ್ ಸದಸ್ಯರನ್ನು ಮುಂಬೈಯಿಂದ ವಾಪಸ್ ಬರುತ್ತಿರುವಾಗ ಉತ್ತರ ಪ್ರದೇಶ ಗಡಿಭಾಗದಲ್ಲಿ ಸೆರೆ ಹಿಡಿದಿದ್ದಾರೆ.

ಬಿಕಾಂ ವಿದ್ಯಾರ್ಥಿನಿಯಾಗಿರುವ ಮಾನ್ಸಿ ಭಟ್ ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದಲ್ಲಿ ಟ್ರಾವೆಲ್ ಏಜೆಂಟ್ ಆಗಿ ಪಾರ್ಟ್-ಟೈಮ್ ಕೆಲಸ ಮಾಡುತ್ತಿದ್ದಳು. ಆದರೆ ಈ ಕೆಲಸ ಮಾಡುತ್ತಿದ್ದುದು, ತನ್ನ ಕಾರ್ಯಾಚರಣೆಗಳಿಗೆ ನೆರವಾಗುವ ನಿಟ್ಟಿನಲ್ಲಿ.

ಮೂಲತಃ ಉತ್ತರಾಖಂಡದ ಪೌರಿ ಜಿಲ್ಲೆಯವಳಾದ ಈಕೆ ಆರೋಪಿಗಳಲ್ಲೊಬ್ಬನಾದ ವಿಕ್ರಮ್ ಆಪ್ತ ಗೆಳತಿ. ಈತನ ತಂದೆ ಜವಳಿ ಕಾರ್ಖಾನೆಯೊಂದರಲ್ಲಿ ಮ್ಯಾನೇಜರ್. ಮಾನ್ಸಿ ತಂದೆ ಉತ್ತರಾಖಂಡ ಸರಕಾರದ ಹಿರಿಯ ಅಧಿಕಾರಿಯಾಗಿದ್ದು, ಕೆಲವೇ ಸಮಯದ ಹಿಂದಷ್ಟೇ ತೀರಿಕೊಂಡಿದ್ದರು.

ಮಾನ್ಸಿ ತನ್ನ ತಾಯಿಯೊಂದಿಗೆ ದೆಹಲಿಯ ಇಂದಿರಾಪುರಂ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ವರ್ಷದ ಹಿಂದಷ್ಟೇ ಗ್ಯಾಂಗಿಗೆ ಸೇರಿಕೊಂಡವಳು, ಕೆಲವೇ ಸಮಯದಲ್ಲಿ ತನ್ನ ಜಾಣಾಕ್ಷತೆಯಿಂದ ಲೀಡರ್ ಆಗಿ ಬದಲಾಗಿದ್ದಳು.

ಮಾನ್ಸಿ ಭಟ್, ವಿಕ್ರಮ್ ಹೊರತುಪಡಿಸಿ ರಮೇಶ್, ಸತ್ಯೇಂದ್ರ, ಚಂದ್, ಮುಖೇಶ್ ಮತ್ತು ಅಮಿತ್ ಎಂಬ ಆರೋಪಿಗಳು ಕೂಡ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ಇವರೆಲ್ಲರ ಹೆತ್ತವರು ಉತ್ತರ ಪ್ರದೇಶದ ಸಾರಿಗೆ ಮತ್ತು ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಗಳು.

ಈ ಬಗ್ಗೆ ವಿವರಣೆ ನೀಡುವ ಪೊಲೀಸ್ ಅಧಿಕಾರಿ ರಘುಬೀರ್ ಲಾಲ್ ಪ್ರಕಾರ ಕಳ್ಳರ ಗ್ಯಾಂಗ್ ಜಟಿಲ ಕಾರ್ಯವಿಧಾನಗಳನ್ನು ಅನುಸರಿಸುತ್ತಿತ್ತು. ನಗರದಿಂದ ನಗರಕ್ಕೆ ವಿಮಾನದ ಮೂಲಕ ಇಲ್ಲವೇ ತಮ್ಮದೇ ವಾಹನಗಳ ಮೂಲಕ ಹೋಗಿ ಐಷಾರಾಮಿ ಹೋಟೇಲುಗಳಲ್ಲಿ ತಂಗುತ್ತಿದ್ದರು. ಆ ಮೂಲಕ ಯಾವುದೇ ರೀತಿಯಲ್ಲೂ ಸಂಶಯ ಬರದಂತೆ ಆರೋಪಿಗಳು ನಡೆದುಕೊಳ್ಳುತ್ತಿದ್ದರು.

ಗ್ಯಾಂಗ್ ಲೀಡರ್ ಮಾನ್ಸಿ ಕಳ್ಳತನ ಮಾಡಬೇಕಿರುವ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಿ ಬರುತ್ತಿದ್ದಳು. ಅದಕ್ಕಾಗಿ ಬಳಸುತ್ತಿದ್ದ ಹಾದಿ ತಾನು ಕೊರಿಯರ್ ಹುಡುಗಿ ಎಂಬ ಸೋಗು. ಶಂಕೆ ಬರದ ರೀತಿಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳ ಜತೆ ಮಾತುಕತೆ ನಡೆಸಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಳು.

ಉದ್ಯಮಿಗಳು ಮತ್ತು ಉನ್ನತ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ಬಹುಮಹಡಿ ಕಟ್ಟಡಗಳಿಗೆ ಕೊರಿಯರ್ ಹುಡುಗರ ಸೋಗಿನಲ್ಲಿ ದಾಳಿ ನಡೆಸಿ ಸಂಪತ್ತುಗಳನ್ನು ದೋಚಿ ಅದನ್ನು ಹೊಟೇಲುಗಳಿಗೆ ಕೊಂಡೊಯ್ಯುತ್ತಿದ್ದರು. ಅಲ್ಲಿಂದ ಮಾನ್ಸಿ ಕಳ್ಳತನ ಮಾಡಿದ ವಸ್ತುಗಳನ್ನು ವಿಮಾನದ ಮೂಲಕ ದೆಹಲಿಗೆ ಕೊಂಡೊಯ್ದು ತನ್ನ ಗ್ಯಾಂಗಿನ ಸದಸ್ಯರಿಗೆ ಹಂಚುತ್ತಿದ್ದಳು.

ಈ ತಂಡವು ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ 18ಕ್ಕೂ ಹೆಚ್ಚು ಬೃಹತ್ ಪ್ರಮಾಣದ ಕಳ್ಳತನಗಳನ್ನು ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆ ಪೊಲೀಸರಿಗೆ ಈ ಗ್ಯಾಂಗ್ ಕಳ್ಳತನ ಮಾಡಿರುವ 2.25 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸಿಕ್ಕಿವೆ.
ಸಂಬಂಧಿತ ಮಾಹಿತಿ ಹುಡುಕಿ