ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು; 'ಪಿತಾಮಹ' ಅಡ್ವಾಣಿಗೆ ಕಾಂಗ್ರೆಸ್ ಎಚ್ಚರಿಕೆ
(Ayodhya verdict | Congress | LK Advani | Bhishm Pitamah)
ಅಯೋಧ್ಯೆ ತೀರ್ಪು; 'ಪಿತಾಮಹ' ಅಡ್ವಾಣಿಗೆ ಕಾಂಗ್ರೆಸ್ ಎಚ್ಚರಿಕೆ
ನವದೆಹಲಿ, ಶನಿವಾರ, 25 ಸೆಪ್ಟೆಂಬರ್ 2010( 19:57 IST )
90ರ ದಶಕದ ತನ್ನ ವಿವಾದಿತ ರಥಯಾತ್ರೆಯ 20ನೇ ವರ್ಷವನ್ನು ಸಂಭ್ರಮಿಸಿರುವ ಎಲ್.ಕೆ. ಅಡ್ವಾಣಿಯವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ 'ಭೀಷ್ಮ ಪಿತಾಮಹ' ಎಂದು ಬಣ್ಣಿಸಿರುವ ಕಾಂಗ್ರೆಸ್, ಬಿಜೆಪಿಯು ದೇಶದ ಜಾತ್ಯತೀತ ತತ್ವದ ಮೇಲೆ ಪರಿಣಾಮ ಬೀರುವ ಅಥವಾ ಹಳೆ ಗಾಯಗಳನ್ನು ಕೆದಕುವುದಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.
ಅಡ್ವಾಣಿಯವರು ಎನ್‌ಡಿಎಯ ಭೀಷ್ಮ ಪಿತಾಮಹ. ಸಾಕಷ್ಟು ವಿವೇಕ ಜ್ಞಾನವನ್ನು ಹೊಂದಿರುವ ಅಡ್ವಾಣಿ ಅಥವಾ ಅವರ ಪಕ್ಷವು (ಬಿಜೆಪಿ) ಭಾರತದ ಅನೇಕತ್ವ ಮತ್ತು ಜಾತ್ಯತೀತ ತತ್ವಗಳ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಹಾಗೂ ಈಗಾಗಲೇ ಆಗಿರುವ ಗಾಯವನ್ನು ಗುಣಪಡಿಸಲು ಸಾಕಷ್ಟು ಕಾಲ ತೆಗೆದುಕೊಂಡಿರುವ ಹಳೆ ಗಾಯವನ್ನು ಕೆದಕುವುದಿಲ್ಲ ಎಂಬ ವಿಶ್ವಾಸ ನನ್ನದು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಪತ್ರಕರ್ತರಿಗೆ ತಿಳಿಸಿದರು.
20 ವರ್ಷಗಳ ಹಿಂದೆ ಇದೇ ತಿಂಗಳಲ್ಲಿ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಗೆ ತನ್ನ ಯಾತ್ರೆಯನ್ನು ಮುನ್ನಡೆಸಿದ್ದರು. ಈ ಯಾತ್ರೆಯಿಂದಾಗಿ ಕೋಮು ಭಾವನೆಗಳು ಕೆರಳಿ ದಳ್ಳುರಿಯನ್ನೆಬ್ಬಿಸಿದ್ದವು. ಗಾಯಗಳು ತೆರೆದುಕೊಂಡಿದ್ದವು. ದೇಶವು ಈ ಹೊಡೆತದಿಂದ ಮೇಲಕ್ಕೇಳಲು ಸಾಕಷ್ಟು ಸಮಯ ಬೇಕಾಯಿತು ಎಂದು ಪರೋಕ್ಷವಾಗಿ ಬಿಜೆಪಿ ವರಿಷ್ಠನ ವಿರುದ್ಧ ವಾಗ್ದಾಳಿ ನಡೆಸಿದರು.
20 ವರ್ಷಗಳ ತನ್ನ ಅಯೋಧ್ಯಾ ರಥಯಾತ್ರೆಯ ನೆನಪಿಗಾಗಿ ಗುಜರಾತಿನ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ್ದ ಅಡ್ವಾಣಿಯವರು, ಶಿವನಿಗೆ ಪೂಜೆ ಸಲ್ಲಿಸಿದ್ದರು. 1990ರ ಸೆಪ್ಟೆಂಬರ್ 25ರಂದು ಅಯೋಧ್ಯೆಗೆ ಇಲ್ಲಿಂದ ಯಾತ್ರೆ ಆರಂಭಿಸಿದ ನಂತರ ಪ್ರತಿವರ್ಷವೂ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಹಿಂದುತ್ವದ ನಾಯಕಿ ಉಮಾಭಾರತಿಯವರ ಜತೆ ಮಂದಿರಕ್ಕೆ ಭೇಟಿ ನೀಡಿದ್ದ ಜನಪ್ರಿಯ ನಾಯಕ ಮಾತನಾಡುತ್ತಾ, ಅಲಹಾಬಾದ್ ಹೈಕೋರ್ಟ್ ನೀಡಬೇಕಿದ್ದ ಅಯೋಧ್ಯೆ ತೀರ್ಪಿಗೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಸೆಪ್ಟೆಂಬರ್ 24ರಂದು ಲಕ್ನೋ ವಿಶೇಷ ಪೀಠವು ಅಯೋಧ್ಯೆ ಒಡೆತನದ ಕುರಿತು ಮಹತ್ವದ ತೀರ್ಪು ನೀಡಬೇಕಿತ್ತು. ಆದರೆ ತೀರ್ಪನ್ನು ಮುಂದೂಡಬೇಕೆಂದು ಅರ್ಜಿಯೊಂದು ಸುಪ್ರೀಂ ಕೋರ್ಟ್ ಪ್ರವೇಶಿಸಿದ ಕಾರಣ, ಈ ಕುರಿತು ಸೆಪ್ಟೆಂಬರ್ 28ರಂದು ನ್ಯಾಯಾಲಯ ವಿಚಾರಣೆ ನಡೆಸಿ ತನ್ನ ನಿರ್ಧಾರ ಪ್ರಕಟಿಸಲಿದೆ.