ಗುರ್ಗಾಂವ್, ಭಾನುವಾರ, 26 ಸೆಪ್ಟೆಂಬರ್ 2010( 13:38 IST )
ನಗರದ ಸುಶಾಂತ್ ಲೋಕ್ ಸೆಕ್ಟರ್ ಪ್ರದೇಶದಲ್ಲಿ ಕೆಲಸದಾಕೆಯನ್ನು ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸರ್ದಾರ್ ಸಿಂಗ್, ಪಶ್ಚಿಮ ಬಂಗಾಳ ಮೂಲದ 45 ವರ್ಷ ವಯಸ್ಸಿನ ಮಹಿಳೆಯನ್ನು ಸುಶಾಂತ್ ಲೋಕ್ ಸೆಕ್ಟರ್‌ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು,ಅತ್ಯಾಚಾರವೇಸಗಿರುವುದು ದೃಢಪಟ್ಟಿದೆ. ರವಿವಾರದಂದು ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗುತ್ತಿದ್ದು, ಅತ್ಯಾಚಾರವೆಸಗುತ್ತಿರುವ ಸಂದರ್ಭದಲ್ಲಿ ಹಾಜರಿದ್ದ ವ್ಯಕ್ತಿಯ ಬಂಧನಕ್ಕಾಗಿ ಜಾಲಬೀಸಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತ ಎಸ್.ಎಸ್.ದೇಸ್‌ವಾಲ್ ತಿಳಿಸಿದ್ದಾರೆ.
ಅತ್ಯಾಚಾರವೆಸಗುತ್ತಿರುವ ಸಂದರ್ಭದಲ್ಲಿ ಕೋಣೆಯ ಹೊರಗೆ ಕಾವಲು ಕಾಯುತ್ತಿದ್ದ ವ್ಯಕ್ತಿಯ ವಿವರಗಳನ್ನು ದೊರಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಮನೆಯ ಮಾಲೀಕ, ಬಾಡಿಗೆ ವಿಷಯ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಮಹಿಳೆ ಶುಕ್ರವಾರದಂದು ರಾತ್ರಿ ಸೆಕ್ಟರ್-56ರ ಪೊಲೀಸ್ ಠಾಣೆಗೆ ಹಾಜರಾಗಿದ್ದಳು.
ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಮನೆಯ ಮಾಲೀಕನ ವಿರುದ್ಧದ ಸಮಸ್ಯೆಗಳನ್ನು ಚರ್ಚಿಸಿದ ನಂತರ ಮಹಿಳೆಯನ್ನು ಮನೆಗೆ ಬಿಡುವುದಾಗಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಸರ್ದಾರ್ ಸಿಂಗ್ ಮನವಿ ಮಾಡಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಠಾಣೆಯ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್, ಸರ್ದಾರ್‌ಸಿಂಗ್‌ಗೆ ಮಹಿಳೆಗೆ ಮನೆಯವರಿಗೆ ಡ್ರಾಪ್ ಕೊಡುವಂತೆ ನಿರ್ದೇಶನ ನೀಡಿದರು.ಮಹಿಳೆಯೊಂದಿಗೆ ಮನೆಗೆ ತೆರಳಿದ ನಂತರ ಸರ್ದಾರ್ ಸಿಂಗ್ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.