ಭಯೋತ್ಪಾದನಾ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡರೂ ಪ್ರಾಣ ಬಿಡದ ದೇಹವದು. ಕ್ಷಣಕ್ಷಣವೂ ವೇದನೆ ಮತ್ತು ಹಿಂಸೆಯನ್ನೇ ಉಸಿರಾಡುತ್ತಿದ್ದರೂ ಸಾವು ಬರುತ್ತಿಲ್ಲ. ದಯವಿಟ್ಟು ಅವರಿಗೆ ದಯಾಮರಣ ಕರುಣಿಸಿ -- ಹೀಗೆಂದು ಸರಕಾರಕ್ಕೆ ಮನವಿ ಮಾಡಿಕೊಂಡಿರುವುದು ಸ್ವತಃ ಅವರ ಪತ್ನಿ ಬೇಬಿ ಚೌಧರಿ.
ನನ್ನ ಗಂಡ ಎಂದರೆ ನನಗೆ ಜೀವ. ಅವರೇ ನನ್ನ ಸರ್ವಸ್ವ. ಆದರೆ ಅವರು ನೋವಿನಿಂದ ನರಳುತ್ತಿರುವುದನ್ನು ನನ್ನಿಂದ ನೋಡಲಾಗುತ್ತಿಲ್ಲ. ಕೆಲವೊಂದು ಬಾರಿ ಅವರು ಉಸಿರಾಡುವುದನ್ನೂ ನಿಲ್ಲಿಸಿಬಿಡುತ್ತಾರೆ. ಅವರು ಬದುಕಿರುವುದು ಹೌದೋ-ಅಲ್ಲವೋ ಎಂದು ನಮಗೆ ಗ್ರಹಿಸಲಾಗದ ಗೊಂದಲಕ್ಕೆ ತಳ್ಳುತ್ತಾರೆ. ಏನೇ ಆದರೂ ಅವರನ್ನು ನನ್ನಿಂದ ನೋಡಲಾಗುತ್ತಿಲ್ಲ. ಕನಿಷ್ಠ ನಾವಿಡುತ್ತಿರುವ ಬೇಡಿಕೆಯನ್ನಾದರೂ ಸ್ವೀಕರಿಸಲಿ ಎಂದು ಗೋಗರೆದಿದ್ದಾರೆ ಎಂದು 'ಮುಂಬೈ ಮಿರರ್' ಪತ್ರಿಕೆ ವರದಿ ಮಾಡಿದೆ.
2008ರ ನವೆಂಬರ್ 26ರಂದು ಪಾಕಿಸ್ತಾನದ ಧರ್ಮಾಂಧ ದಶ ಪಾತಕಿಗಳು ವಾಣಿಜ್ಯ ನಗರಿ ಮುಂಬೈ ಮೇಲೆ ದಂಡೆತ್ತಿ ಬಂದಿದ್ದ ಸಂದರ್ಭದಲ್ಲಿ ವಿಲೆ ಪಾರ್ಲೆ ಬಾಂಬ್ ಸ್ಫೋಟದಲ್ಲಿ 36ರ ಹರೆಯದ ಶ್ಯಾಮಸುಂದರ್ ತೀವ್ರವಾಗಿ ಗಾಯಗೊಂಡಿದ್ದರು.
PR
ಮುಂಬೈ ದಾಳಿಯ ಸಂದರ್ಭದಲ್ಲಿ ಅಬೂ ಇಸ್ಮಾಯಿಲ್ ಮತ್ತು ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್, ಆರ್‌ಡಿಎಕ್ಸ್ ನಿರ್ಮಿತ ಬಾಂಬನ್ನು ಟ್ಯಾಕ್ಸಿಯೊಂದರಲ್ಲಿ ಇಟ್ಟಿದ್ದರು. ಇದು ವಿಲೆ ಪಾರ್ಲೆಯಲ್ಲಿ ಸ್ಫೋಟಗೊಂಡಿದ್ದರಿಂದ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.
ಬಿಸ್ಕಿಟ್ ಕಂಪನಿಯೊಂದರಲ್ಲಿ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ಯಾಮಸುಂದರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಘಟನೆ ನಡೆದಿತ್ತು. ತಲೆ, ಭುಜ ಮತ್ತು ಕೈಗಳಿಗೆ ತೀವ್ರ ಗಾಯವಾಗಿ ಆಸ್ಪತ್ರೆ ಸೇರಿದ್ದ ಬಲಿಪಶು ನಿಧಾನವಾಗಿ ತನ್ನ ಸ್ಮರಣ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬಂದಿದ್ದರು.
ಮೊದಲೆರಡು ಶಸ್ತ್ರಚಿಕಿತ್ಸೆ ನಡೆದ ಹೊತ್ತಿನಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಕೆಲವು ತಿಂಗಳುಗಳ ನಂತರ ಅವರು ಸ್ಮರಣ ಶಕ್ತಿ ಕಳೆದುಕೊಳ್ಳಲಾರಂಭಿಸಿದರು. ನಂತರ ತಿಳಿದು ಬಂದದ್ದೇನೆಂದರೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂಬ ಆಘಾತಕಾರಿ ಸುದ್ದಿ. ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರು ಫಲಿತಾಂಶ ಮಾತ್ರ ಶೂನ್ಯ. ಹಾಗಾಗಿ ನಾನು ಮುಖ್ಯಮಂತ್ರಿ, ರಾಜಕಾರಣಿಗಳು ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿ, ದಯವಿಟ್ಟು ನನ್ನ ಗಂಡನಿಗೆ ದಯಾಮರಣವನ್ನು ಕರುಣಿಸಿ ಎಂದಿದ್ದೆ ಎಂದು ಗಂಡನ ಮುಖ ನೋಡಲಾಗದೆ ಬೇಬಿ ಕಷ್ಟಪಟ್ಟು ವಿವರಣೆ ನೀಡುತ್ತಾರೆ.
ತನ್ನ ಹೆತ್ತವರು, ಸಹೋದರಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಶ್ಯಾಮಸುಂದರ್ ಇಡೀ ಕುಟುಂಬಕ್ಕಿರುವ ಏಕೈಕ ಆಧಾರ. ಈಗ ಅವರ ಸಹೋದರಿ ಮೀನಾ ಚೌಧರಿ ಕಂಪನಿಯೊಂದರಲ್ಲಿ ಆರು ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಆದರೆ ಏಳು ಮಂದಿಯ ದಿನಚರಿಗೆ ಇದು ಎಲ್ಲೂ ಸಾಲುತ್ತಿಲ್ಲ.
'ನನ್ನ ಅಣ್ಣನಿಗೆ ಸಾವೇ ಅಂತಿಮವಾಗಿದ್ದರೆ, ದಯವಿಟ್ಟು ಅವರಿಗೊಂದು ಶಾಂತಿಯುತ ಸಾವನ್ನು ಕರುಣಿಸು ಎಂದು ದೇವರಲ್ಲಿ ಬೇಡುತ್ತಿದ್ದೇನೆ' -- ಇದು ಗದ್ಗದಿತರಾಗುತ್ತಾ ಸಹೋದರಿ ಮೀನಾ ಬಾಯಿಯಿಂದ ಬರುತ್ತಿರುವ ಮಾತು.
ಜನತೆ ಕೈ ಬಿಡಲಿಲ್ಲ... ಪತ್ರಿಕಾ ವರದಿ ಪ್ರಕಟವಾಗುತ್ತಿದ್ದಂತೆ ಎಲ್ಲೆಡೆಯಿಂದ ಸಹಾಯದ ಹೊಳೆಯೇ ಹರಿದು ಬರುತ್ತಿದೆ. ದೇಶ-ವಿದೇಶಗಳಿಂದ ಹಲವು ಸಹೃದಯಿಗಳು ಕುಟುಂಬದ ರಕ್ಷಣೆಗೆ ಧಾವಿಸಿದ್ದಾರೆ.
ಬಲಿಪಶು ಶ್ಯಾಮಸುಂದರ್ ಪತ್ನಿ ಬೇಬಿಯವರನ್ನು ನಾನು ಭೇಟಿ ಮಾಡಿ, ಅವರಿಗೆ 50,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದೇನೆ ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಕೃಷ್ಣ ಹೆಗಡೆ ತಿಳಿಸಿದ್ದಾರೆ.
ಯಾರೋ ಒಬ್ಬರು ದುಬೈಯಿಂದ 25,000 ರೂಪಾಯಿ ಕಳುಹಿಸಿದ್ದಾರೆ. ಇನ್ನೊಬ್ಬರು ಅಮೆರಿಕಾದಿಂದ ಫೋನ್ ಮಾಡಿ ಸಹಾಯ ಮಾಡುತ್ತೇನೆ ಎಂದಿದ್ದಾರೆ. ನಾನು ಸಾಮಾಜಿಕ ಸಂಪರ್ಕತಾಣ 'ಫೇಸ್‌ಬುಕ್' ಮೂಲಕವೂ ಈ ಕುಟುಂಬಕ್ಕೆ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.
ಶ್ಯಾಮಸುಂದರ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಇಚ್ಛಿಸುವವರು Krishna Hegde, Homai Mahal, Shahaji Raje Rd,Vile Parle, Mumbai ಹೆಸರಿನಲ್ಲಿ ಚೆಕ್ ಅಥವಾ 022-26827677 ಸಂಖ್ಯೆಗೆ ಕರೆ ಮಾಡಬಹುದು.