ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ, ಶ್ರೀರಾಮ, ಬಾಬರ, ಕೇಸುಗಳು ಮತ್ತು ಕರಸೇವಕರು (Ayodhya dispute | Ram Janmabhoomi | Babri Masjid | VHP)
Bookmark and Share Feedback Print
 
90ರ ದಶಕದಲ್ಲಿ ದೇಶಕ್ಕೆ ದೇಶವನ್ನೇ ನಡುಗಿಸಿದ್ದ ಅಯೋಧ್ಯೆ ವಿವಾದ ಮತ್ತೆ ಜನತೆಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಅಯೋಧ್ಯೆಯ ವಿವಾದಿತ ಸ್ಥಳದ ಒಡೆತನದ ಬಗ್ಗೆ ಉಚ್ಚ ನ್ಯಾಯಾಲಯವು ತಡವಾಗಿಯಾದರೂ ತೀರ್ಪು ನೀಡುವುದು ಖಚಿತ. ಹಾಗಾಗಿ ಅಯೋಧ್ಯೆಯೆನ್ನುವುದು ಏನು, ಅಲ್ಲಿ ಏನಿತ್ತು, ನಂತರದ ದಿನಗಳಲ್ಲಿ ಏನೇನಾಯಿತು ಎಂಬ ಕುತೂಹಲವನ್ನು ತಣಿಸುವ ಯತ್ನವಿದು.

ರಾಮ ಯಾರು, ರಾಮಮಂದಿರ ಇತ್ತೇ?
ಸಾಕ್ಷಾತ್ ವಿಷ್ಣುವಿನ ಏಳನೇ ಅವತಾರ ಶ್ರೀರಾಮ. ರಾಮಾಯಣ ಸೇರಿದಂತೆ ಹಿಂದೂ ಧರ್ಮದ ಯಾವುದೇ ಗ್ರಂಥಗಳಲ್ಲಿ ರಾಮ ಹುಟ್ಟಿದ ದಿನಾಂಕ ಅಥವಾ ವರ್ಷವನ್ನು ನಮೂದಿಸಲಾಗಿಲ್ಲ. ಆದರೆ ಹುಟ್ಟಿದ್ದು, ರಾಜ್ಯಭಾರ ಮಾಡಿದ್ದು ಕೋಸಲ ರಾಜ್ಯದಲ್ಲಿ. ಅದರ ರಾಜಧಾನಿ ಅಯೋಧ್ಯೆ.
PR

ಕೋಟ್ಯಂತರ ಹಿಂದೂಗಳು ನಂಬಿಕೊಂಡಿರುವ ಪ್ರಕಾರ ರಾಮಮಂದಿರ ಮತ್ತು ರಾಮ ಹುಟ್ಟಿದ್ದು ಅಯೋಧ್ಯೆಯಲ್ಲೇ. ಋಗ್ವೇದದ ಕ್ರಿ.ಪೂ. 1450ರ ಆಸುಪಾಸಿನಲ್ಲಿ ರಾಮ ಅವತಾರ ತಾಳಿದ್ದ. ಅಯೋಧ್ಯೆಯ ಚಕ್ರವರ್ಥಿ ದಶರಥ ಮತ್ತು ಕೌಸಲ್ಯರ ಹಿರಿಯ ಪುತ್ರನಾಗಿದ್ದ ರಾಮ ಮರ್ಯಾದ ಪುರುಷೋತ್ತಮ ಎಂದೇ ಭಕ್ತರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ.

1528ರವರೆಗೆ ಇಲ್ಲಿ ರಾಮನ ದೇವಸ್ಥಾನವಿತ್ತು ಎಂದೇ ಹಿಂದೂಗಳು ನಂಬಿಕೊಂಡು ಬಂದಿದ್ದಾರೆ. ಆದರೆ ರಾಮಮಂದಿರ ಇತ್ತು ಎನ್ನುವ ಕುರಿತು ಪ್ರತ್ಯಕ್ಷ ಸಾಕ್ಷಿ ನೀಡಲು ಈಗ ಯಾರಿಂದಲೂ ಸಾಧ್ಯವಿಲ್ಲ.

ಸ್ಥಳದಲ್ಲಿ ನಡೆದ ಉತ್ಖನನದಲ್ಲಿ ದೊರೆತ ಪುರಾವೆಗಳು ರಾಮಮಂದಿರ ಇತ್ತು ಎನ್ನುವುದನ್ನು ಸೂಚಿಸುತ್ತವೆ ಎಂದು ವರದಿಗಳು ಹೇಳುತ್ತಾ ಬಂದಿವೆ. ಪ್ರಮುಖವಾಗಿ ಜೇಡಿ ಮಣ್ಣಿನಿಂದ ತಯಾರಿಸಲಾದ ಆಕೃತಿಗಳು, ಪ್ರಾಣಿ ಮತ್ತು ಮಾನವ ಉಪಯೋಗಿ ವಸ್ತುಗಳು, ಕಂಬದ ರಚನೆಗಳು, ಅಡಿಪಾಯ, ಗೋಡೆಗಳ ಸಂದುಗಳು, ಸಮಾಧಿಗಳು, ದೇವನಾಗರಿ ಲಿಪಿಯಲ್ಲಿರುವ ಶಿಲಾಶಾಸನಗಳು, ಛಬೂತರಗಳು ಉತ್ಖನನದ ವೇಳೆಯಲ್ಲಿ ಪತ್ತೆಯಾಗಿವೆ.

ಇದು ಮೊಘಲ್ ದೊರೆಯ ದುಷ್ಕೃತ್ಯ...
1483ರ ಫೆಬ್ರವರಿ 23ರಿಂದ 1531ರ ಜನವರಿ 5ರವರೆಗೆ ನಡುವೆ ಬದುಕಿದ್ದ ಉಜ್ಬೇಕಿಸ್ತಾನದ ಫರ್ಗಾನಾ ನಗರದ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ (ಬಾಬರ್ ಎಂದೇ ಪ್ರಸಿದ್ಧ) ಎಂಬ ಮೊಘಲ್ ದೊರೆ 1527ರಲ್ಲಿ ಭಾರತದ ಮೇಲೆ ದಾಳಿ ನಡೆಸಿದ್ದ.

ಒಂಬತ್ತು ಪತ್ನಿಯರನ್ನು ಹೊಂದಿದ್ದ ಬಾಬರ ಭಾರತದಲ್ಲಿನ ಹಿಂದೂ ದೊರೆಗಳನ್ನು ಸೋಲಿಸಿ ಹಲವು ಪ್ರಾಂತ್ಯಗಳನ್ನು, ರಾಜ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡು, ಅದಕ್ಕೆ ತನ್ನ ಜನರಲ್ ಮಿರ್ ಬಂಕಿಯನ್ನು ವೈಸರಾಯ್ ಆಗಿ ನೇಮಿಸಿದ್ದ. ಬಾಬರ ನೀಡಿದ ಆದೇಶದಂತೆ 1528ರಲ್ಲಿ ಮಿರ್ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸ ಮಾಡಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ.
PR

ಎಚ್ಚೆತ್ತರು ಹಿಂದೂಗಳು...
ಮೊಘಲ್ ದೊರೆಗಳ ನಿರಂಕುಶ ಆಡಳಿತದ ಅವಧಿಯಲ್ಲಿ ಏನೂ ಮಾಡಲಾಗದ ಹಿಂದೂಗಳು 1800ರ ಅವಧಿಯಲ್ಲಿ ಜಾಗೃತರಾಗುತ್ತಾ ಬಂದು ಪ್ರತಿರೋಧ ತೋರಲಾರಂಭಿಸಿದರು. ಇದು ಮೊದಲ ಬಾರಿ ತಾರಕಕ್ಕೆ ಏರಿದ್ದು 1853ರಲ್ಲಿ.

ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸೀತಾ ಕೀ ರಸೋಯಿ (ಸೀತೆ ಅಡುಗೆ ಮಾಡಿದ್ದ ಸ್ಥಳ) ಮತ್ತು ರಾಮ್ ಚಬೂತರ (ರಾಮ ಜನ್ಮಸ್ಥಳ) ನಿರ್ಮಾಣಕ್ಕೆ ಮುಂದಾಗಿದ್ದರಿಂದ ಹಿಂದೂ-ಮುಸ್ಲಿಮರ ನಡುವೆ ಘರ್ಷಣೆ ನಡೆದ 75 ಮಂದಿ ಪ್ರಾಣ ಅರ್ಪಿಸಿದ್ದರು.

ಈ ಹೊತ್ತಿಗೆ ಬ್ರಿಟೀಷ್ ಆಡಳಿತದ ಕದಂಬಹಸ್ತ ಭಾರತದಲ್ಲಿತ್ತು. ಆದರೂ ರಾಮನ ಜನ್ಮಸ್ಥಳ ತಮಗೆ ಬೇಕೆಂಬ ಹೋರಾಟವನ್ನು ತೀವ್ರಗೊಳಿಸಿದ ಹಿಂದೂಗಳು, 1857ರಲ್ಲಿ ಅಯೋಧ್ಯೆಯಲ್ಲಿದ್ದ ಮಸೀದಿಯ ಒಂದು ಭಾಗದಲ್ಲಿ ಪೂಜಾ ಸ್ಥಳ ಮಾಡಿಕೊಂಡರು. ಹಿಂದೂ-ಮುಸ್ಲಿಮರ ನಡುವೆ ಇದು ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು 1959ರಲ್ಲಿ ಮನಗಂಡ ಬ್ರಿಟೀಷರು, ಎರಡು ಗೋಡೆಗಳನ್ನು ಕಟ್ಟುವ ಮೂಲಕ ಪ್ರತ್ಯೇಕವಾಗಿ ಎರಡೂ ಧರ್ಮೀಯರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದರು.

ಪ್ರಕರಣ ನ್ಯಾಯಾಲಯಕ್ಕೆ...
ಅಯೋಧ್ಯೆಯ ಪ್ರಕರಣವು ಮೊದಲ ಬಾರಿ ನ್ಯಾಯಾಲಯ ಪ್ರವೇಶಿಸಿದ್ದು 1885ರಲ್ಲಿ. ಮಹಂತಾ ರಘುವರ್ ದಾಸ್ ಎಂಬವರು ರಾಮ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ಪ್ರಕರಣ ದಾಖಲಿಸಿದ್ದರು.

ಸ್ವಾತಂತ್ರೋತ್ತರದಲ್ಲಿ ದಿನದಿಂದ ದಿನಕ್ಕೆ ಪ್ರಬಲರಾಗುತ್ತಾ ಹೋದ ಹಿಂದೂಗಳು ಮುಸ್ಲಿಮರ ತೀವ್ರ ವಿರೋಧದ ನಡುವೆಯೂ 1949ರಲ್ಲಿ ಮಸೀದಿಯ ಒಳಗಡೆ ರಾಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಸಿವಿಲ್ ಕೇಸ್ ದಾಖಲಾದ ಕಾರಣ ಸರಕಾರವು ಮಧ್ಯ ಪ್ರವೇಶಿಸಿತು. ಅಲ್ಲದೆ ಇದನ್ನು ವಿವಾದಿತ ಸ್ಥಳ ಎಂದು ಘೋಷಿಸಿ, ಬೀಗ ಜಡಿಯಿತು.

1950ರಲ್ಲಿ ಹಿಂದೂ ಮಹಾಸಭಾ ಸದಸ್ಯ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಫೈಜಾಬಾದಿನಲ್ಲಿ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಅದೇ ವರ್ಷ ದಿಗಂಬರ ಅಖಾಡದ ಪರಮಹಂಸ ರಾಮಚಂದ್ರ ದಾಸ್ ಎರಡನೇ ಪ್ರಕರಣ ದಾಖಲಿಸಿ, ನಂತರ ಹಿಂದಕ್ಕೆ ಪಡೆದುಕೊಂಡಿದ್ದರು.
PR

ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು 1959ರಲ್ಲಿ ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮತ್ತೊಂದು ದಾವೆ ಹೂಡಿತ್ತು. ನಂತರ 1961ರಲ್ಲಿ ಡಿಕ್ಲರೇಶನ್ ಮತ್ತು ಒಡೆತನಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಪ್ರಕರಣ ದಾಖಲಿಸಿತ್ತು.

ಬೀಗ ತೆಗೆಸಿದ್ದು ರಾಜೀವ್ ಗಾಂಧಿ...
1949ರಲ್ಲಿ ವಿವಾದಿತ ಮಸೀದಿಗೆ ಜಡಿದಿದ್ದ ಬೀಗವನ್ನು ತೆರೆಸಿದ್ದು ಅಂದಿನ ಪ್ರಧಾನಿ ರಾಜೀವ್ ಗಾಂಧಿ. ಯಾವುದೇ ಧರ್ಮದವರು ಇಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿರಲಿಲ್ಲ.

ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ ಭಾರೀ ಪ್ರತಿಭಟನೆಗಳನ್ನು ನಡೆಸಿತು. ಇದಕ್ಕೆ ಮಣಿದ ರಾಜೀವ್ 1985ರಲ್ಲಿ ಬೀಗ ತೆಗೆಸಿದರು.

ಹರಿಶಂಕರ್ ದುಬೆಯವರ ಅರ್ಜಿಯನ್ನು ಪರಿಶೀಲಿಸಿ 1986ರ ಫೆಬ್ರವರಿ 1ರಂದು ಮಸೀದಿಯ ಗೇಟುಗಳನ್ನು ತೆರೆದು ಹಿಂದೂಗಳಿಗೆ ದರ್ಶನ, ಪೂಜೆಗೆ ನ್ಯಾಯಾಧೀಶರು ಅವಕಾಶ ಕೊಟ್ಟರು. ಇದೇ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ 'ರಾಮ ಜನ್ಮಭೂಮಿ ನ್ಯಾಸ'ವನ್ನು ಸ್ಥಾಪಿಸಿತು.

ಇದನ್ನು ವಿರೋಧಿಸಿದ ಮುಸ್ಲಿಮರು ಅದೇ ವರ್ಷದ ಫೆಬ್ರವರಿಯಲ್ಲಿ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಿಕೊಂಡರು.

ಡಿಕ್ಲರೇಶನ್ ಮತ್ತು ಒಡೆತನ ನೀಡಬೇಕೆಂದು 1989ರಲ್ಲಿ ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ಹೆಸರಿನಲ್ಲಿ ಪ್ರಕರಣ ದಾಖಲಾಗಿತ್ತು. ಈ ಹೊತ್ತಿನಲ್ಲಿ ಆಂದೋಲನ ತೀವ್ರಗೊಳಿಸಿದ ವಿಶ್ವ ಹಿಂದೂ ಪರಿಷತ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಯಿತು. ಅಲ್ಲದೆ ಮಸೀದಿಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಲಾಯಿತು.

1989ರ ಆಗಸ್ಟ್ 25ರಂದು ವಿವಾದಿತ ಕಟ್ಟಡದ 2.77 ಎಕರೆ ಪ್ರದೇಶವನ್ನು ಹೊರತುಪಡಿಸಿ 42.09 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಾಲಯ ಅನುಮತಿ ನೀಡಿತು.

ಅದರ ಬೆನ್ನಿಗೆ ಅಂದರೆ 1989ರ ನವೆಂಬರ್ 10ರಂದು ವಿವಾದಿತ ಪ್ರದೇಶದ ಹೊರಗಡೆ ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಲು ವಿಶ್ವಹಿಂದೂ ಪರಿಷತ್ತಿಗೆ ಕೇಂದ್ರದಲ್ಲಿನ ಕಾಂಗ್ರೆಸ್ ಸರಕಾರವು ಒಪ್ಪಿಗೆ ಸೂಚಿಸಿತು.
PR

ರಥಯಾತ್ರೆಯ ನಂತರ...
ಅಯೋಧ್ಯೆ ಕುರಿತು ಭಾರತದಾದ್ಯಂತ ಜಾಗೃತಿ ಮೂಡಿಸಿದ್ದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ. ಅವರು 1990ರ ಸೆಪ್ಟೆಂಬರ್ 25ರಂದು ಗುಜರಾತಿನ ಸೋಮನಾಥ ಮಂದಿರದಿಂದ ತನ್ನ ಮಹತ್ವಾಕಾಂಕ್ಷೆಯ ರಥಯಾತ್ರೆಯನ್ನು 10,000 ಕಿಲೋ ಮೀಟರ್ ದೇಶದಾದ್ಯಂತ ಕೊಂಡೊಯ್ಡು ಅಯೋಧ್ಯೆಯಲ್ಲಿ ಸಮಾಪ್ತಿಗೊಳಿಸಿದರು. ಇದು ದೇಶದ ಹಿಂದೂಗಳಲ್ಲಿ ಭಾರೀ ಅಲೆಯನ್ನೇ ಎಬ್ಬಿಸಿತ್ತು.

ರಾಮಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವಾಗಬೇಕು ಎಂಬ ಕೂಗು ಹೆಚ್ಚಾಗತೊಡಗಿದ್ದ ಕಾಲವದು. ಅಲ್ಲಿದ್ದ ಮಸೀದಿಯನ್ನು ಧ್ವಂಸಗೊಳಿಸಲು ಅದೇ ವರ್ಷದ ಅಕ್ಟೋಬರ್ 30ರಂದು ಸಾವಿರಾರು ಕರಸೇವಕರು ಸ್ಥಳಕ್ಕೆ ತೆರಳಿದ್ದರು. ಆದರೆ ಆಗ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅದಕ್ಕೆ ಅವಕಾಶ ನೀಡದೆ ಗೋಲಿಬಾರಿಗೆ ಆದೇಶ ನೀಡಿ ಕರಸೇವಕರ ಯತ್ನವನ್ನು ವಿಫಲಗೊಳಿಸಿದ್ದರು.

ನವೆಂಬರ್ ತಿಂಗಳ ಹೊತ್ತಿಗೆ ಬಿಹಾರದಲ್ಲಿ ಅಡ್ವಾಣಿಯವರನ್ನು ಬಂಧಿಸಿದಾಗ ರಥಯಾತ್ರೆಗೂ ತೊಡಕಾಯಿತು. ಆಗ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದ ವಿ.ಪಿ. ಸಿಂಗ್ ಸರಕಾರದಿಂದ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದುಕೊಂಡು ಸರಕಾರವನ್ನು ಉರುಳಿಸಿತು. ಬೆನ್ನಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನೇರಿತು. ಇದು ಅಯೋಧ್ಯೆ ಜಾಗೃತಿಯಲ್ಲಿ ಮಹತ್ವದ ಮೈಲುಗಲ್ಲಾಯಿತು.

1992ರ ಮಾರ್ಚ್ 20ರಂದು ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರವು ವಿವಾದಿತ ಪ್ರದೇಶದ ಸುತ್ತಮುತ್ತವಿದ್ದ 42.09 ಎಕರೆ ಜಾಗವನ್ನು ರಾಮ ಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಿತು. ಅದೇ ವರ್ಷದ ನವೆಂಬರ್ 27ರಂದು ರಾಜ್ಯ ಸರಕಾರ ಭರವಸೆ ನೀಡಿದ ನಂತರ, ಸಾಂಕೇತಿಕ ಕರಸೇವೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತು.

ಇದೇ ನಿಟ್ಟಿನಲ್ಲಿ ದೇಶದ ಮೂಲೆ-ಮೂಲೆಗಳಿಂದ ತೆರಳಿದ ವಿಎಚ್‌ಪಿ, ಆರೆಸ್ಸೆಸ್, ಶಿವಸೇನೆ ಮತ್ತು ಬಿಜೆಪಿ ಬೆಂಬಲಿಗರು ಕರಸೇವಕರ ಹೆಸರಿನಲ್ಲಿ ಅಯೋಧ್ಯೆಗೆ ತಂಡೋಪತಂಡವಾಗಿ ತೆರಳಿ ಮಸೀದಿಯನ್ನು ಧ್ವಂಸ ಮಾಡಿದ್ದು 1992ರ ಡಿಸೆಂಬರ್ 6ರಂದು.

ಅಲ್ಲಿ ರಾಮನ ವಿಗ್ರಹವನ್ನೂ ಕರಸೇವಕರು ಪ್ರತಿಷ್ಠಾಪನೆ ಮಾಡುತ್ತಾರೆ. ದೇಶದಾದ್ಯಂತ ಕೋಮುಗಲಭೆಯೂ ನಡೆಯುತ್ತದೆ. ಒಟ್ಟಾಗೆ ಘಟನೆಯಿಂದಾಗಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು.

ಗೋದ್ರಾ ರೈಲಿಗೆ ಬೆಂಕಿ...
ಮಸೀದಿ ಧ್ವಂಸಗೊಂಡ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಲಿಬರ್ಹಾನ್ ಆಯೋಗವನ್ನು ಅದೇ ವರ್ಷದ ಡಿಸೆಂಬರ್ 16ರಂದು ಅಸ್ತಿತ್ವಕ್ಕೆ ತಂದು, ತನಿಖೆಗೆ ಆದೇಶಿಸಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರವಿತ್ತೆ ಎಂಬುದರ ಕುರಿತು ಉತ್ಖನನ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಹೈಕೋರ್ಟ್ 2002ರಲ್ಲಿ ನಿರ್ದೇಶನವನ್ನೂ ನೀಡಿತು.

ರಾಮಮಂದಿರ ವಿಚಾರವನ್ನು ಕೈ ಬಿಡದ ವಿಶ್ವ ಹಿಂದೂ ಪರಿಷತ್ 2002ರ ಮಾರ್ಚ್ 15ರೊಳಗೆ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಗಡುವು ವಿಧಿಸಿ, ಈ ಸಂಬಂಧ ಸಭೆಯನ್ನು ಕರೆದಿರುತ್ತದೆ. ಇದಕ್ಕಾಗಿ ಸಾವಿರಾರು ಸ್ವಯಂ ಸೇವಕರು ಅಯೋಧ್ಯೆಗೆ ಆಗಮಿಸಿದ್ದರು.
PR

ಅಂತಹ ಒಂದು ಗುಜರಾತಿನ ತಂಡ ವಾಪಸ್ ಹೋಗುತ್ತಿದ್ದಾಗ ಗೋದ್ರಾ ರೈಲಿನಲ್ಲಿ ಜೀವಂತ ಸುಟ್ಟು ಕರಕಲಾದರು. ಈ ಘಟನೆಯಲ್ಲಿ 58 ಕರಸೇವಕರು ಬಲಿಯಾಗಿದ್ದರು. ಇದರ ಹಿಂದೆ ದುಷ್ಕರ್ಮಿಗಳ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ನಡೆದ ಕೋಮುಗಲಭೆಗೆ ಗುಜರಾತ್ ಹೊತ್ತಿ ಉರಿದು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾದರು.

ಸುದೀರ್ಘ ವಿಚಾರಣೆ...
2002ರಲ್ಲಿ ಅಯೋಧ್ಯೆಯ ಒಡೆತನ ಯಾರಿಗೆ ಸೇರಿದ್ದು ಎಂಬುದನ್ನು ನಿರ್ಧರಿಸಲು ಅಲಹಾಬಾದ್ ಹೈಕೋರ್ಟ್ ಲಕ್ನೋದ ವಿಶೇಷ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಲಾಗುತ್ತದೆ.

ಮಸೀದಿಯನ್ನು ದೇವಸ್ಥಾನದ ಮೇಲೆಯೇ ನಿರ್ಮಿಸಲಾಗಿದೆ. 10ನೇ ಶತಮಾನದಲ್ಲಿ ದೇವಾಲಯವಿತ್ತು ಎಂದು ಉತ್ಖನನದ ವರದಿಗಳು ಹೇಳಿದವು. ಇದನ್ನು ಮುಸ್ಲಿಮರು ಕೂಡ ತೀವ್ರವಾಗಿ ವಿರೋಧಿಸಿದರು. ಅಡ್ವಾಣಿಯವರ ವಿಚಾರಣೆಯೂ ನಡೆಯಿತು. ಆದರೆ ಅವರು ದೋಷಮುಕ್ತರಾದರು. ಆದರೆ ಇದನ್ನು ಮರು ಪರಿಶೀಲನೆ ನಡೆಸಬೇಕು ಎಂದು ಮೇಲ್ಮನವಿ ಸಲ್ಲಿಸಲಾಗುತ್ತದೆ.

ಅಯೋಧ್ಯೆ ಒಡೆತನದ ಕುರಿತ ಪ್ರಕರಣದ ವಿಚಾರಣೆ ಮುಗಿಸುವ ಅಲಹಾಬಾದ್ ಹೈಕೋರ್ಟ್ ಲಕ್ನೋ ವಿಶೇಷ ಪೀಠವು ಸೆಪ್ಟೆಂಬರ್ 24ರಂದು ಅಪರಾಹ್ನ 3.30ಕ್ಕೆ ತೀರ್ಪು ನೀಡುವುದಾಗಿ ಹೇಳುತ್ತದೆ. ಈ ಸಂಬಂಧ ಸೌಹಾರ್ದಯುತ ಪರಿಹಾರಕ್ಕೆ ಅವಕಾಶ ನೀಡಬೇಕೆಂಬ ಮನವಿಯೂ ತಿರಸ್ಕೃತವಾಗುತ್ತದೆ.

ಆದರೆ ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ, ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡುತ್ತದೆ. ತೀರ್ಪನ್ನು ಮುಂದೂಡುವ ಕುರಿತು ಪ್ರಕರಣವನ್ನು ಸೆಪ್ಟೆಂಬರ್ 28ರಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ