ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲಿದೆ 'ಇಂಡಿಯನ್ ಮುಜಾಹಿದೀನ್'ಗೆ ಸಾಕ್ಷ್ಯ?; ದಿಗ್ವಿಜಯ್
(Indian Mujahideen | Digvijay Singh | Congress | Teesta Setalvad)
ಕಾಂಗ್ರೆಸ್‌ನ ಎಡಬಿಡಂಗಿ ವಕ್ತಾರಲ್ಲೊಬ್ಬರಾದ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಯಿದು. ಸದಾ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ಅವರ ಪ್ರಕಾರ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಅಸ್ತಿತ್ವದ ಕುರಿತು ಭಾರತೀಯ ತನಿಖಾ ದಳಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲವಂತೆ!
ಇಂತಹ ಒಂದು ಹೇಳಿಕೆ ನೀಡುವ ಮೂಲಕ ಸ್ವತಃ ಕಾಂಗ್ರೆಸ್ ಮತ್ತು ಯುಪಿಎ ಸರಕಾರವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಮುಜುಗರಕ್ಕೆ ಸಿಲುಕಿಸಿದ್ದಾರೆ.
ದೆಹಲಿಯ ಜಾಮಾ ಮಸೀದಿ ಸಮೀಪ ಇತ್ತೀಚೆಗಷ್ಟೇ ನಡೆದ ಎರಡೆರಡು ದುಷ್ಕೃತ್ಯಗಳ ನಂತರ ರಾಜಧಾನಿಯಲ್ಲಿ ನಡೆದ 'ಭಯೋತ್ಪಾದನೆಯ ರಾಜಕೀಯ' ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದ ದಿಗ್ವಿಜಯ್, ಇಂಡಿಯನ್ ಮುಜಾಹಿದೀನ್ ಅಸ್ತಿತ್ವದ ಕುರಿತು ನನಗೇನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 19ರಂದು ಜಾಮಾ ಮಸೀದಿ ಸಮೀಪ ವಿದೇಶೀಯರಿಗೆ ಇಬ್ಬರು ಬೈಕ್ ಸವಾರರು ಗುಂಡಿಕ್ಕಿ ಪರಾರಿಯಾದ ನಂತರ ಪತ್ರಿಕಾ ಕಚೇರಿಗಳಿಗೆ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಬಂದಿರುವ ಇ-ಮೇಲ್ ಬಗ್ಗೆ ಅವರು ಮಾತನಾಡುತ್ತಿದ್ದರು. 'ಇಂಡಿಯನ್ ಮುಜಾಹಿದೀನ್ ಇದೆಯೋ ಅಥವಾ ಇಲ್ಲವೋ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಆ ಸಂಘಟನೆ ಅಸ್ತಿತ್ವದಲ್ಲಿರುವ ಕುರಿತು ಯಾವುದೇ ಗುರುತರ ಸಾಕ್ಷ್ಯಗಳು ಲಭ್ಯವಾಗಿಲ್ಲ' ಎಂದರು.
ಈ ಹೊತ್ತಿನಲ್ಲಿ ಅವರು ಬಾಟ್ಲಾ ಹೌಸ್ ಎನ್‌ಕೌಂಟರ್ ಬಗ್ಗೆಯೂ ಸಂಶಯಗಳನ್ನು ವ್ಯಕ್ತಪಡಿಸಿದರು. 2008ರ ಸೆಪ್ಟೆಂಬರ್ 19ರಂದು ಬಲಿಯಾದ ಮೊಹಮ್ಮದ್ ಸಾಜಿದ್ ಪೊಲೀಸರ ಉದ್ದೇಶಪೂರ್ವಕ ಎನ್‌ಕೌಂಟರಿಗೆ ಬಲಿಯಾಗಿರುವ ಸಾಧ್ಯತೆಗಳಿವೆ ಎಂದರು.
ಮುಸ್ಲಿಂ ಯುವಕರನ್ನು ಭಯೋತ್ಪಾದನೆಯ ಪ್ರಕರಣಗಳಲ್ಲಿ ಸಿಲುಕಿಸುತ್ತಿರುವುದರ ಕುರಿತು ಚರ್ಚಿಸಿದ ದಿಗ್ವಿಜಯ್, ಒಬ್ಬ ಯುವಕನ ಮೇಲೆ ದೇಶದಾದ್ಯಂತ 40ರಿಂದ 59ರಷ್ಟು ಎಫ್ಐಆರ್ ಹೇರಿದರೆ, ಆತನ ಜೀವಿತಾವಧಿಯಲ್ಲಿ ಅದನ್ನು ಮುಗಿಸುವುದು ಅಸಾಧ್ಯ ಎಂದರು.
ಅದೇ ಹೊತ್ತಿಗೆ ಕೇಳಿ ಬಂದ ಆರೆಸ್ಸೆಸ್ ನಿಷೇಧ ಕುರಿತು ಪ್ರಶ್ನೆಗೆ, ಯಾವುದೇ ಸಮಸ್ಯೆಯನ್ನು ಬಗೆಹರಿಸಲು ನಿಷೇಧವೇ ಪರಿಹಾರವಲ್ಲ ಎಂದರು. ತಕ್ಷಣವೇ 'ಸಿಮಿ'ಯನ್ನು ನಿಷೇಧಿಸಲಾಗಿದೆಯಲ್ಲವೇ ಎಂದಾಗ, ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದಷ್ಟೇ ತಿಳಿಸಿ ಸುಮ್ಮನಾದರು.
ಈ ಕಾರ್ಯಕ್ರಮದಲ್ಲಿ ವಿವಾದಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಕೂಡ ಭಾಗವಹಿಸಿದ್ದರು. ದೇಶದಲ್ಲಿನ ಕೋಮು ಹಿಂಸಾಚಾರದ ಕುರಿತು ಮಾತಿಗಿಳಿದ ಅವರು, 'ದೇಶದಲ್ಲಿ ಹಿಂದೂ ಭಯೋತ್ಪಾದನೆ ಇರುವುದು ವಾಸ್ತವ, ಇದನ್ನು ಯಾರು ಕೂಡ ತಳ್ಳಿ ಹಾಕಲು ಸಾಧ್ಯವಿಲ್ಲ. ಆದರೆ ಇಂದು ಭಾರತೀಯ ಬೇಹುಗಾರಿಕಾ ದಳವು ಸಂಪೂರ್ಣ ಕೇಸರಿಮಯವಾಗಿದೆ' ಎಂದರು.