ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 100 ದಿನಗಳ ಬಳಿಕ ಕಾಶ್ಮೀರದಲ್ಲಿ ಬಾಗಿಲು ತೆರೆದ ಶಾಲೆಗಳು
(Kashmir Valley | Hurriyat leader | Syed Ali Shah Geelani | schools)
ಕಾಶ್ಮೀರ ಕಣಿವೆಯ ಮಕ್ಕಳು ಕೊನೆಗೂ ಶಾಲೆಯತ್ತ ಮುಖ ಮಾಡಿದ್ದಾರೆ. ಕಳೆದ 100 ದಿನಗಳಿಂದ ಹಿಂಸಾಚಾರದ ಕಾರಣಗಳಿಂದಾಗಿ ಮುಚ್ಚಲಾಗಿದ್ದ ಶಾಲೆಗಳನ್ನು ನಿಷೇಧಾಜ್ಞೆಗಳ ನಡುವೆಯೂ ಇಂದು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭದ್ರತಾ ಪಡೆಗಳ ರಕ್ಷಣೆಯೊಂದಿಗೆ ಶಾಲೆಗಳಿಗೆ ತೆರಳಿದ್ದಾರೆ.
ಆದರೂ ಹುರಿಯತ್ ಕಾನ್ಫರೆನ್ಸ್ ತೀವ್ರವಾದಿ ನಾಯಕ ಸಯ್ಯದ್ ಆಲಿ ಶಾಹ್ ಗಿಲಾನಿ ನೀಡಿರುವ ಕರೆಯಿಂದಾಗಿ ಹಾಜರಾತಿಯಲ್ಲಿ ಅಲ್ಪ ಪ್ರಮಾಣದ ಹಿನ್ನಡೆ ಕಂಡು ಬಂದಿದೆ. ತಮ್ಮ ಮಕ್ಕಳನ್ನು ಹೆತ್ತವರು ಶಾಲೆಗಳು ಮತ್ತು ಕಾಲೇಜುಗಳಿಗೆ ಕಳುಹಿಸಬಾರದು ಎಂದು ಗಿಲಾನಿ ಹೆತ್ತವರಲ್ಲಿ ಮನವಿ ಮಾಡಿಕೊಂಡಿದ್ದರು.
PTI
ಇದೇ ವರ್ಷದ ಜೂನ್ 11ರಂದು 17ರ ಹರೆಯದ ವಿದ್ಯಾರ್ಥಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾದ ನಂತರ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಶಿಕ್ಷಣ ವ್ಯವಸ್ಥೆಯೂ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಎಲ್ಲಾ ಶಾಲೆಗಳನ್ನೂ ಬಂದ್ ಮಾಡಲಾಗಿತ್ತು.
ಮತ್ತೆ ಶಾಲೆಗಳನ್ನು ತೆರೆಯಲು ನಿರ್ಧರಿಸಿದ ರಾಜ್ಯ ಸರಕಾರ, ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ-ಕಾಲೇಜುಗಳಿಗೆ ತೆರಳಲು ಸಹಾಯವಾಗುವಂತೆ ಸರಕಾರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. 11ಕ್ಕೂ ಹೆಚ್ಚು ನಗರಗಳಲ್ಲಿ 170ಕ್ಕೂ ಹೆಚ್ಚು ಬಸ್ಸುಗಳನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗಾಗಿಯೇ ಮೀಸಲಾಗಿಡಲಾಗಿದೆ.
ಇಂದಿನ ಒಟ್ಟಾರೆ ಹಾಜರಾತಿ ಕೇವಲ ಶೇ.20ರಷ್ಟು ಮಾತ್ರ ಕಂಡು ಬಂದಿದೆ. ಆದರೂ ಇದನ್ನು ಧನಾತ್ಮಕ ಪ್ರತಿಕ್ರಿಯೆ ಎಂದು ಸರಕಾರಿ ಮೂಲಗಳು ಹೇಳಿಕೊಂಡಿವೆ. ನಾಳೆ ಇದರಲ್ಲಿ ಇನ್ನಷ್ಟು ಪ್ರಗತಿ ಕಾಣುವ ಭರವಸೆ ಶಾಲೆಗಳದ್ದು.
ನಾಳೆಯಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳು ಸೇರಿದಂತೆ ರಾಜ್ಯದಾದ್ಯಂತ ಶಾಲೆಗಳನ್ನು ಮತ್ತೆ ತೆರೆಯಲು ನಿರ್ಧರಿಸಿದ್ದೇವೆ. ಜತೆಗೆ ವಾರ್ಷಿಕ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ ಎಂದು ರಾಜ್ಯದ ಶಿಕ್ಷಣ ಸಚಿವ ಪೀರ್ಜಾದಾ ಮೊಹಮ್ಮದ್ ಸಯೀದ್ ನಿನ್ನೆಯಷ್ಟೇ ಹೇಳಿದ್ದರು.
ಪ್ರತ್ಯೇಕತಾವಾದಿಗಳ ಕರೆಗಳು ಮುಂದಿನ ದಿನಗಳಲ್ಲಿ ಮಹತ್ವ ಕಳೆದುಕೊಳ್ಳಬಹುದು ಎಂಬುದು ಸರಕಾರದ ನಿರೀಕ್ಷೆ. 'ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ಯಾವೊಬ್ಬ ಚಿಂತನಾ ಲಹರಿಯುಳ್ಳ ವ್ಯಕ್ತಿಯೂ ತಳ್ಳಿ ಹಾಕಲಾರ. ಆದರೆ ಸರಕಾರವು ನಮ್ಮ ಮಕ್ಕಳ ಭವಿಷ್ಯವನ್ನು ತಲೆಕೆಟ್ಟವರ ಕನಸಿನಂತೆ ನೋಡುತ್ತಿದ್ದಾರೆ' ಎಂದು ನಿನ್ನೆಯಷ್ಟೇ ಗಿಲಾನಿ ಹೇಳಿದ್ದರು.
ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಕೂಡ ಮನೆಯಲ್ಲೇ ಉಳಿಯಬೇಕು. ಶಾಲೆಗಳು ಮತ್ತು ಕಾಲೇಜುಗಳು ಕಣಿವೆ ರಾಜ್ಯದಲ್ಲಿ ಆರಂಭಗೊಂಡರೂ ನಾಗರಿಕ ನಿಷೇಧಾಜ್ಞೆಯನ್ನು ಜನತೆ ಮುಂದುವರಿಸಬೇಕು ಎಂದು ಗಿಲಾನಿ ಜನರಲ್ಲಿ ಮನವಿ ಮಾಡಿಕೊಂಡಿದ್ದರು.