ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆಯಲ್ಲಿ ಮಸೀದಿ-ಮಂದಿರ ಜತೆಗಿರಲಿ: ಮುಸ್ಲಿಮರು (Babri Masjid | Ayodhya | Ram Temple | Muslim)
Bookmark and Share Feedback Print
 
ಬಹು ನಿರೀಕ್ಷಿತ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಒಡೆತನ ಕುರಿತ ಅಲಹಾಬಾದ್ ಹೈಕೋರ್ಟ್ ತೀರ್ಪಿನಿಂದ ಮಸೀದಿ ಮತ್ತು ಮಂದಿರವನ್ನು ಅಯೋಧ್ಯೆಯಲ್ಲಿ ಜತೆಜತೆಗೆ ಕಟ್ಟಬಹುದೇ? ಅಂತಹ ನಿರ್ಧಾರಕ್ಕೆ ಮುಂದಾದಲ್ಲಿ ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿರುತ್ತದೆ?

ಸಿಂಪಲ್, ಮುಸ್ಲಿಮರಿಂದ ಯಾವುದೇ ಆಕ್ಷೇಪವಿಲ್ಲ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಹಾಗೂ ಧಾರ್ಮಿಕ ಮುಖಂಡರಾಗಿರುವ ಅಬ್ದುಲ್ ರಹೀಮ್ ಖುರೇಷಿಯವರ ಪ್ರಕಾರ ಇದರಲ್ಲಿ ತಪ್ಪೇನೂ ಇಲ್ಲ. ಹಾಗಾಗಿ ಮುಸ್ಲಿಮರು ವಿರೋಧಿಸಲಾರರು ಎಂದು ಹೇಳಿದ್ದಾರೆ.

ಸೋಮವಾರ ಹೈದರಾಬಾದಿನಲ್ಲಿ ಮಾತನಾಡುತ್ತಿದ್ದ ಅವರು, ಈ ರೀತಿ ಜತೆಜತೆಯಾಗಿ ಹಲವು ದೇವಸ್ಥಾನಗಳು ಮತ್ತು ಮಸೀದಿಗಳು ಭಾರತದ ಹಲವೆಡೆ ಇವೆ. ಅಯೋಧ್ಯೆಯಲ್ಲೂ ಹೀಗಾಗುವುದಾದರೆ ಅದರಲ್ಲಿ ತಪ್ಪೇನೂ ಇಲ್ಲ ಎಂದರು.

ಹೀಗೆ ಮಾಡುವುದಾದಲ್ಲಿ ದೇವಸ್ಥಾನ ಮತ್ತು ಮಂದಿರಕ್ಕೆ ಪ್ರತ್ಯೇಕ ದಾರಿಗಳಿರುವಂತೆ ನೋಡಿಕೊಳ್ಳಬೇಕು. ಹಾಗಾದಲ್ಲಿ ಯಾವುದೇ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಉದ್ಭವಿಸಲಾರವು. ದೇಶದ ಇತರೆಡೆಗಳಲ್ಲಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ಸರಕಾರ ಗಮನ ಹರಿಸಬೇಕು ಎಂದು ಖುರೇಷಿ ಒತ್ತಾಯಿಸಿದ್ದಾರೆ.

ಮಂದಿರ ಮತ್ತು ಮಸೀದಿ ಎರಡನ್ನೂ ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ನಿರ್ಮಾಣ ಮಾಡಬೇಕು ಎಂದು ಕೋರ್ಟ್ ನಿರ್ಧಾರ ಮಾಡಿದರೆ, ಪ್ರಸಕ್ತ ರಾಮನ ಚಬೂತರ ಇರುವ ಮಸೀದಿಯ ಹೊರ ಆವರಣದಲ್ಲಿ ರಾಮಮಂದಿರವನ್ನು ಕಟ್ಟಬಹುದು. ಅದೇ ರೀತಿ ಮೂರು ಗೋಪುರಗಳಿದ್ದ ಹಳೆಯ ಮಸೀದಿಯಿದ್ದ ಸ್ಥಳದ ಒಳ ಆವರಣದಲ್ಲಿ ನೂತನ ಮಸೀದಿಯನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಈ ಚಬೂತರವನ್ನು ಹಿಂದೂಗಳು 150ಕ್ಕೂ ಹೆಚ್ಚು ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದು, ಇದನ್ನು ಮುಸ್ಲಿಮರು ವಿರೋಧಿಸಿಲ್ಲ. 1885ರಲ್ಲಿ ಚಬೂತರ ರಾಮ ಹುಟ್ಟಿದ ಸ್ಥಳ ಎಂದು ಹೇಳುತ್ತಾ, ನ್ಯಾಯಾಲಯಕ್ಕೆ ಹೋದಾಗಲೂ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದರು.

ಅದೇ ಹೊತ್ತಿಗೆ 1949ರ ಡಿಸೆಂಬರ್ 22ರಂದು ರಾತ್ರಿ ನಡೆದ ಘಟನೆಯನ್ನೂ ಖುರೇಷಿ ನೆನಪಿಸಿಕೊಂಡಿದ್ದಾರೆ. ಆ ದಿನ ಅಯೋಧ್ಯೆಯ ಬಾಬ್ರಿ ಮಸೀದಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.

ಇದನ್ನು ಅತಿಕ್ರಮ ಪ್ರವೇಶ ಎಂದು ಕರೆದಿರುವ ಖುರೇಷಿ, ಈ ರೀತಿ ತಪ್ಪು ಮಾಡಿದ ದುಷ್ಕರ್ಮಿಗಳನ್ನು ಶಿಕ್ಷಿಸುವ ಬದಲು ಮಸೀದಿಗೆ ಪ್ರವೇಶಿಸದಂತೆ ಮುಸ್ಲಿಮರನ್ನು ತಡೆಯಲಾಯಿತು ಎಂದು ಆರೋಪಿಸಿದರು.

ಅವರ ಪ್ರಕಾರ ಬಾಬ್ರಿ ಮಸೀದಿಯಿದ್ದ ಒಳ ಆವರಣ ಮುಸ್ಲಿಮರಿಗೆ ಸೇರಿದ್ದು ಮತ್ತು ಹೊರ ಆವರಣ ಹಿಂದೂಗಳಿಗೆ ಸೇರಿದ್ದು ಎಂದು ತೀರ್ಪು ನೀಡಲಿದೆ. ಈ ಬಗ್ಗೆ ಅವರು ಅಪಾರ ವಿಶ್ವಾಸವನ್ನೂ ಹೊಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ