ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಪ್ರೀಂ ನಿರ್ಧಾರಕ್ಕೆ ಬಿಜೆಪಿ, ಕಾಂಗ್ರೆಸ್, ಆರೆಸ್ಸೆಸ್ ಸ್ವಾಗತ (Ayodhya verdict | BJP | Congress | RSS)
Bookmark and Share Feedback Print
 
ಅಯೋಧ್ಯೆ ಒಡೆತನದ ಕುರಿತ ತೀರ್ಪನ್ನು ಮುಂದೂಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಆಡಳಿತ ಪಕ್ಷ ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಹಲವು ಪಕ್ಷಗಳು-ಸಂಘಟನೆಗಳು ಸ್ವಾಗತಿಸಿವೆ.

ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಹೇರಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ ಸುಪ್ರೀಂ ಕೋರ್ಟ್ ನಿರ್ಧಾರ ಸರಿಯಾಗಿದೆ. ಪ್ರಕರಣದಲ್ಲಿ ಕಾನೂನು ವಿಳಂಬವಾಗಬಾರದು ಎನ್ನುವುದನ್ನು ಪಕ್ಷ ಹೇಳುತ್ತಾ ಬಂದಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಮತ್ತು ನಿರ್ಮಲಾ ಸೀತಾರಾಮನ್ ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದು, ಹೈಕೋರ್ಟ್ ತೀರ್ಪು ಶೀಘ್ರದಲ್ಲೇ ಹೊರ ಬೀಳಲಿ ಎಂದು ಹೇಳಿದ್ದಾರೆ.

ರಾಮ ಜನ್ಮಭೂಮಿ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿರುವ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮತ್ತು ಆರೆಸ್ಸೆಸ್ ಕೂಡ ಸರ್ವೋಚ್ಛ ನ್ಯಾಯಾಲಯದ ತೀರ್ಮಾನವನ್ನು ಪ್ರಶಂಸಿಸಿದ್ದು, ತಾವು ಹೈಕೋರ್ಟ್ ತೀರ್ಪಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.

ಹೈಕೋರ್ಟ್ ತೀರ್ಪನ್ನು ಗೌರವಿಸಿ: ಕಾಂಗ್ರೆಸ್‌
ತೀರ್ಪನ್ನು ಮುಂದೂಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ನಿರ್ಧಾರವು ಪಕ್ಷಕ್ಕೆ ಸಂತಸ ತಂದಿದೆ ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದು, ನ್ಯಾಯಾಂಗದ ತೀರ್ಪಿಗೆ ಕಾಲ ಒದಗಿ ಬಂದಿದೆ ಎಂದಿದ್ದಾರೆ.

ಅದೇ ಹೊತ್ತಿಗೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅಲಹಾಬಾದ್ ಹೈಕೋರ್ಟ್ ನೀಡಲಿರುವ ತೀರ್ಪಿಗೆ ತಲೆ ಬಾಗಬೇಕು. ಯಾವುದೇ ರೀತಿಯ ಹಿಂಸಾಚಾರವನ್ನು ಪ್ರೋತ್ಸಾಹಿಸಬಾರದು ಎಂದೂ ದ್ವಿವೇದಿ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ತೀರ್ಪನ್ನು ಸ್ವಾಗತಿಸುತ್ತಾ, ನ್ಯಾಯಾಲಯ ನೀಡಲಿರುವ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹೇಳಿದ್ದಾರೆ.

ಕಾಲ ಬದಲಾಗಿದೆ. ಇದು 1992 ಅಲ್ಲ, 2010ರಲ್ಲಿದ್ದೇವೆ. ಆಗ ನಡೆದಿರುವುದು ಈಗಲೂ ನಡೆಯಲು ಸಾಧ್ಯವಿಲ್ಲ. ನ್ಯಾಯಾಲಯ ನೀಡುವ ತೀರ್ಪನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು ಎಂದರು.

ಸುನ್ನಿ ವಕ್ಫ್ ಮಂಡಳಿ ಕೂಡ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದೆ. ಸಂಧಾನ ಮಾರ್ಗಕ್ಕೆ ಯಾರೂ ಒಲವು ತೋರಿಸದೇ ಇರುವುದರಿಂದ ನ್ಯಾಯಾಲಯ ತೀರ್ಪನ್ನು ಮುಂದೂಡುವುದರಲ್ಲಿ ಅರ್ಥವಿಲ್ಲ ಎಂದು ಇದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ