ಮುಂಬೈ ದಾಳಿ ನಡೆಸಿ ಹತ್ತಾರು ಅಮಾಯಕರನ್ನು ಕೊಂದು ಹಾಕಿ ನ್ಯಾಯಾಲಯದಿಂದ ಮರಣ ದಂಡನೆ ತೀರ್ಪನ್ನು ಪಡೆದುಕೊಂಡಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್ ಜೈಲು ಸಿಬ್ಬಂದಿಗಳಿಗೆ ಹಲ್ಲೆ ಮಾಡಿದ್ದಾನೆ ಎಂದು ಮಹಾರಾಷ್ಟ್ರ ಸರಕಾರ ಸಾಕ್ಷ್ಯ ಸಮೇತವಾಗಿ ಹೈಕೋರ್ಟಿಗೆ ದೂರು ನೀಡಿದೆ.
ಕಸಬ್ ಜೈಲು ಸಿಬ್ಬಂದಿಗಳಿಗೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದರ ತುಣುಕನ್ನು ನ್ಯಾಯಾಲಯಕ್ಕೆ ಒದಗಿಸಲಾಗಿದೆ. ಅಲ್ಲದೆ ತನ್ನ ವಕೀಲರುಗಳ ಜತೆಗಿನ ಮುಚ್ಚಿದ ಕೋಣೆಯೊಳಗಿನ ಮಾತುಕತೆಯನ್ನೂ ಸರಕಾರ ವಿರೋಧಿಸಿದೆ.
166 ಮಂದಿಯ ಸಾವಿಗೆ ಕಾರಣವಾದ 2008ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಕಸಬ್‌ಗೆ ವಿಚಾರಣಾ ನ್ಯಾಯಾಲಯ ನೀಡಿರುವ ಮರಣ ದಂಡನೆ ಶಿಕ್ಷೆಯನ್ನು ಖಚಿತಪಡಿಸುವ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಸರಕಾರಿ ವಕೀಲರು ಈ ದೂರನ್ನು ನೀಡಿದ್ದಾರೆ.
ಸರಕಾರಿ ವಕೀಲ ಉಜ್ವಲ್ ನಿಕ್ಕಂ ಅವರು ಸಿಸಿಟಿವಿಯ ದಾಖಲೆಯನ್ನು ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಪೀಠಕ್ಕೆ ಒದಗಿಸಿದ್ದಾರೆ. ವಕೀಲರುಗಳು ಕಸಬ್ ಜತೆ ಮಾತುಕತೆ ನಡೆಸುವಾಗ ಭದ್ರತಾ ಅಧಿಕಾರಿಗಳ ಎದುರೇ, ಆದರೆ ಶಬ್ದವನ್ನು ಆಲಿಸಲಾಗದಷ್ಟು ದೂರದಲ್ಲಿರಬೇಕು ಎಂಬ ಕಸಬ್ ಮನವಿಯ ಕುರಿತು ಸಿಸಿಟಿವಿಯ ಸಿಡಿಯನ್ನು ಇಂದು ಸಂಜೆ ಚೆಂಬರಿನಲ್ಲಿ ವೀಕ್ಷಿಸಿದ ನಂತರ ನಾಳೆ ನ್ಯಾಯಾಲಯ ತೀರ್ಪು ನೀಡಲಿದೆ.
ಈ ಘಟನೆ ನಡೆದಿರುವುದು ಸೆಪ್ಟೆಂಬರ್ 1ರಂದು. ಕಸಬ್ ಕೆಲವು ಕಾನೂನು ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಮಧ್ಯಪ್ರವೇಶಿಸಿದ್ದರು. ಆಗ ಆತ (ಕಸಬ್) ಜೈಲು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ಸಿಡಿಯಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ ಎಂದು ನಿಕ್ಕಂ ಅವರು ನ್ಯಾಯಮೂರ್ತಿಗಳಿಗೆ ಹೇಳಿದರು.
ಕಸಬ್ ಓರ್ವ ತರಬೇತಿ ಪಡೆದಿರುವ ಕಮಾಂಡೋ. ಆತನ ಚುರುಕಾದ ನಡೆಗಳಿಂದಾಗಿ ಸ್ವತಃ ಆತನ ಪ್ರಾಣ ಮಾತ್ರವಲ್ಲದೆ, ಜೈಲು ಸಿಬ್ಬಂದಿಗಳ ಪ್ರಾಣಕ್ಕೂ ದೊಡ್ಡ ಅಪಾಯ ಎದುರಾಗಬಹುದು ಎಂದು ತಿಳಿಸಿದ ನಿಕ್ಕಂ, ತನ್ನನ್ನು ವಕೀರಲರುಗಳು ಮಾತನಾಡಿಸುವ ಸಂದರ್ಭದಲ್ಲಿ ಜೈಲು ಸಿಬ್ಬಂದಿಗಳು ಮಾತು ಕೇಳದಷ್ಟು ದೂರದಲ್ಲಿರಬೇಕೆಂಬ ಪಾಕಿಸ್ತಾನಿ ಉಗ್ರನ ಮನವಿಯನ್ನು ವಿರೋಧಿಸಿರುವ ಜೈಲರ್ ಅವರ ಅಫಿದಾವಿತನ್ನು ಕೂಡ ಸಲ್ಲಿಸಿದರು.
ಕಸಬ್‌ನಿಗೆ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಆತ ಅಹಿತಕಾರಿ ವರ್ತನೆಯನ್ನು ತೋರಿಸುತ್ತಾನೆ. ಹಾಗಾಗಿ ಆತನನ್ನು ಏಕಾಂಗಿಯಾಗಿ ಭೇಟಿ ಮಾಡಲು ನಮಗೆ (ವಕೀಲರು) ಅವಕಾಶ ನೀಡಬೇಕು. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಅಥವಾ ಪೊಲೀಸರು ಜತೆಗಿರಬಾರದು ಎಂದು ಕಸಬ್ ವಕೀಲ ಅಮೀನ್ ಸೋಲ್ಕರನ್ ಮನವಿ ಮಾಡಿಕೊಂಡರು.