ನ್ಯೂಯಾರ್ಕ್, ಮಂಗಳವಾರ, 28 ಸೆಪ್ಟೆಂಬರ್ 2010( 20:07 IST )
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆ ಅಗತ್ಯವಾಗಿದೆ, ಆದರೆ ತನ್ನ ನೆಲದಿಂದ ಭಾರತವನ್ನು ಗುರಿಯಾಗಿಟ್ಟುಕೊಂಡು ಸೃಷ್ಟಿಯಾಗುತ್ತಿರುವ ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಪಾಕಿಸ್ತಾನ ಮೊದಲು ನಿಲ್ಲಿಸಲಿ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಕರೆ ನೀಡಿದ್ದಾರೆ.
ಭಯೋತ್ಪಾದನೆಯ ಕಳವಳಗಳನ್ನು ಹೊರತುಪಡಿಸಿದ ಪಥದಲ್ಲಿ ಸಾಗಬೇಕು ಎಂದು ನಾವು ಚಿಂತಿಸುತ್ತಿಲ್ಲ. ಭಾರತದ ವಿರುದ್ಧ ತನ್ನ ನೆಲದಿಂದ ಭಯೋತ್ಪಾದನೆಗೆ ಅವಕಾಶ ನೀಡುವುದಿಲ್ಲ ಎಂಬ ತನ್ನ ಭರವಸೆಯನ್ನು ಪಾಕಿಸ್ತಾನವು ನೆರವೇರಿಸುವ ಅಗತ್ಯವಿದೆ ಎಂದರು.
ಅರ್ಥಪೂರ್ಣ ಮಾತುಕತೆಗಳಿಗಾಗಿ ಇಸ್ಲಾಮಾಬಾದ್ ಭಾರತಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ 'ಸಲಹೆ'ಗಳನ್ನು ಕಳುಹಿಸಿದೆ ಎಂಬ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರ ಹೇಳಿಕೆಯ ಕುರಿತು ರಾವ್ ಅವರಲ್ಲಿ ಪ್ರಶ್ನಿಸಿದಾಗ, ಯಾವುದೇ ಉತ್ತರ ನೀಡಲು ನಿರಾಕರಿಸಿದರು.
ಧನಾತ್ಮಕ ಪ್ರತಿಕ್ರಿಯೆಗಳು ಬಂದಲ್ಲಿ ತಕ್ಷಣವೇ ಮಾತುಕತೆಯನ್ನು ಪುನರಾರಂಭಿಸಲಾಗುತ್ತದೆ. ಯಾವುದೇ ಮಾತುಕತೆ ಫಲಿತಾಂಶ ತರುವಂತಿರಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಖುರೇಷಿ ಹೇಳಿದ್ದರು.
ಕಾಶ್ಮೀರ, ಸಿಯಾಚಿನ್ ಮತ್ತು ಜಲ ಸಮಸ್ಯೆಗಳ ಪಟ್ಟಿ ಮಾಡಿದ ಖುರೇಷಿ, ಇಂತಹ ವಿಚಾರಗಳನ್ನು ಮಾತುಕತೆಯ ವಿಚಾರಗಳನ್ನಾಗಿಸದೆ ಪಾಕಿಸ್ತಾನವು ಭಾರತದೊಂದಿಗೆ ಹೇಗೆ ತಾನೇ ಮಾತುಕತೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.
ಅದೇ ಹೊತ್ತಿಗೆ ಇದಕ್ಕೆಲ್ಲ ಪ್ರತಿಕ್ರಿಯಿಸಿರುವ ರಾವ್, ಇಸ್ಲಾಮಾಬಾದ್ ಜತೆಗಿನ ಪರಿಹಾರ ಕಾಣದೇ ಇರುವ ಸಮಸ್ಯೆಗಳ ಬಗ್ಗೆ ನವದೆಹಲಿ ಮಾತುಕತೆ ನಡೆಸಲು ಮುಕ್ತವಾಗಿದೆ ಎಂದಿದ್ದಾರೆ.
ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಪಾಕಿಸ್ತಾನದ ಜತೆ ಮಾತುಕತೆ ಮುಂದುವರಿಸಲು ನಿಷ್ಠೆಯಿಂದಿದ್ದೇವೆ. ಬಗೆಹರಿಯದ ಸಮಸ್ಯೆಗಳ ಕುರಿತು ಮಾತುಕತೆಗೆ ನಾವು ಸಿದ್ಧ. ತರ್ಕಸಮ್ಮತ ಮತ್ತು ಪುಷ್ಠಿದಾಯಕ ನಿಲುವನ್ನು ಹೊಂದಿಕೊಂಡು ಉಭಯ ದೇಶಗಳು ಮಾತುಕತೆ ನಡೆಸಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಅಭಿಪ್ರಾಯಪಟ್ಟರು.