ಮುಂಬೈ ಉಗ್ರರ ದಾಳಿ ಪ್ರಕರಣದ ತಾಜಾ ಬೆಳವಣಿಗೆಯೊಂದರಲ್ಲಿ, ಆರೋಪಿ ಅಜ್ಮಲ್ ಕಸಬ್, ನ್ಯಾಯಾಲಯದ ಮರಣದಂಡನೆ ತೀರ್ಪನ್ನು ವಿರೋಧಿಸಿ ಮುಂಬೈ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದಾನೆ.
ಅಜಮ್ಲ್ ಕಸಬ್ ಪರ ವಕೀಲ ಅಮಿನ್ ಸೋಲಂಕಿ, ಮರಣದಂಡನೆ ತೀರ್ಪನ್ನು ವಿರೋಧಿಸಿ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 2008ರ ನವೆಂಬರ್ 26 ರಂದು ಮುಂಬೈಯಲ್ಲಿ ನಡೆದ ದಾಳಿಯಲ್ಲಿ ಆರೋಪಿ ಅಜ್ಮಲ್ ಕಸಬ್, 166 ಮಂದಿ ಸಾವಿಗೆ ಕಾರಣವಾಗಿದ್ದನು.
ತಮಗೆ ವಿಧಿಸಿರುವ ಮರಣದಂಡನೆ ತುಂಬಾ ಕಠೋರ ಹಾಗೂ ನಿರ್ದಯಿಯಾಗಿದ್ದು, ಪೊಲೀಸರು ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಒದಗಿಸಿದ ಸಾಕ್ಷಾಧಾರಗಳಲ್ಲಿ ಹೆಚ್ಚಿನ ಕೊರತೆಗಳು ಕಂಡು ಬಂದಿವೆ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ನನ್ನ ಭಾವಚಿತ್ರಗಳು ಪತ್ರಿಕೆಗಳಲ್ಲಿ ಹಾಗೂ ಟೆಲಿವಿಜನ್ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವುದರಿಂದ, ಪ್ರತ್ಯಕ್ಷ ಸಾಕ್ಷಿ ಸುಲಭವಾಗಿ ನನ್ನನ್ನು ಗುರುತಿಸಬಹುದಾಗಿದೆ.ಆದ್ದರಿಂದ ಮರಣ ದಂಡನೆ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಅಜ್ಮಲ್ ಕಸಬ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ.