ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೌಡರ ಜಾತ್ಯತೀತ ಜನತಾದಳಕ್ಕೆ ಬಿಹಾರದಲ್ಲಿ 'ಆನೆ' ಬಲ (HD Deve Gowda | Socialist Janata Dal (Democratic) | Devendra Prasad Yadav | JDS)
Bookmark and Share Feedback Print
 
ಇತ್ತೀಚೆಗಷ್ಟೇ ಬಿಹಾರದ ಪಿಎಲ್‌ಇಎಂ ಎಂಬ ಪಕ್ಷವನ್ನು ಜೆಡಿಎಸ್ ಜತೆ ವಿಲೀನಗೊಳಿಸುವಲ್ಲಿ ಸಫಲತೆ ಕಂಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಇದೀಗ ಕೇಂದ್ರದ ಮಾಜಿ ಸಚಿವ ದೇವೇಂದ್ರ ಪ್ರಸಾದ್ ಯಾದವ್ ಅವರ ಸಮಾಜವಾದಿ ಜನತಾದಳವನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಂಡಿದ್ದು, ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಪ್ರಸಕ್ತ ಜೆಡಿಎಸ್‌ಗೆ ಬಿಹಾರದಲ್ಲಿ ಕಿಮ್ಮತ್ತಿನ ಬೆಲೆಯೂ ಇಲ್ಲ. ಆದರೆ ಸಣ್ಣ-ಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಮುನ್ನಡೆಯುವ ಲೆಕ್ಕಾಚಾರ ಗೌಡರದ್ದು. ಅದೇ ನಿಟ್ಟಿನಲ್ಲಿ ಪ್ರಜಾತಾಂತ್ರಿಕ ಲೋಕ ಏಕತಾ ಮಂಚ್ (ಪಿಎಲ್‌ಇಎಂ) ಎಂಬ ಪ್ರಾದೇಶಿಕ ಪಕ್ಷವನ್ನು ಜೆಡಿಎಸ್ ಜತೆ ಇದೇ ತಿಂಗಳಾರಂಭದಲ್ಲಿ ವಿಲೀನಗೊಳಿಸಲಾಗಿತ್ತು.

ಉಮರಾಂಗ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಹಾಲಿ ಶಾಸಕ ಹಾಗೂ ರಾಷ್ಟ್ರೀಯ ಜನತಾದಳ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದ ದದನ್ ಸಿಂಗ್ ಪಕ್ಷವನ್ನು ಜೆಡಿಎಸ್ ಜತೆ ವಿಲೀನಗೊಳಿಸಿ, ಅವರನ್ನೇ ಜೆಡಿಎಸ್‌ನ ಬಿಹಾರ ಘಟಕದ ಅಧ್ಯಕ್ಷರನ್ನಾಗಿ ಗೌಡರು ನೇಮಕಗೊಳಿಸಿದ್ದರು.

ಈಗ ಸಮಾಜವಾದಿ ಜನತಾದಳ (ಡೆಮಾಕ್ರಟಿಕ್) ಪಕ್ಷವನ್ನು ಕೂಡ ಜೆಡಿಎಸ್ ಜತೆ ವಿಲೀನಗೊಳಿಸಲಾಗಿದೆ. ಗೌಡರ ದೆಹಲಿಯಲ್ಲಿನ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಸ್‌ಜೆಡಿಯನ್ನು ವಿಲೀನಗೊಳಿಸಲಾಯಿತು.

ಎರಡು ಪಕ್ಷಗಳನ್ನು ತನ್ನೆಡೆಗೆ ಸೆಳೆದುಕೊಂಡಿರುವ ಜೆಡಿಎಸ್‌‍ಗೆ ಮತ್ತೊಂದು ಬೆಂಬಲ ಸಿಕ್ಕಿರುವುದು ಸಮತಾ ಪಕ್ಷದಿಂದ. ಸಿಬಿಐ ಮಾಜಿ ಹಿರಿಯ ಅಧಿಕಾರಿ ಎನ್.ಕೆ. ಸಿಂಗ್ ನೇತೃತ್ವದ ಈ ಪಕ್ಷವು ಜೆಡಿಎಸ್ ಜತೆ ಸೇರಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ಮಾಜಿ ಸಂಸದ ಮಹೇಂದ್ರ ಸರ್ದಾರ್, ಬಿಹಾರದ ಮಾಜಿ ಉಪ ಸ್ಪೀಕರ್ ಮತ್ತು ಮಾಜಿ ಸಚಿವ ಗಜೇಂದ್ರ ಪ್ರಸಾದ್ ಹಿಮಾಂಶು, ಮಾಜಿ ಶಾಸಕರಾದ ರಾಜ್ ಕುಮಾರ್ ಯಾದವ್, ಗಣೇಶ್ ಪ್ರಸಾದ್ ಯಾದವ್, ರಾಮ್ ಕುಮಾರ್ ಯಾದವ್, ಗಣೇಶ್ ಪಾಸ್ವಾನ್, ಅನೀಸ್ ಅಹ್ಮದ್, ಕೇಂದ್ರೀಯ ಉಗ್ರಾಣ ಮಂಡಳಿಯ ಮಾಜಿ ಅಧ್ಯಕ್ಷ ಪ್ರೊ. ಎಸ್.ಪಿ. ಮಂಡಲ್, ಎಸ್‌ಜೆಡಿ ಯುವವಾಹಿನಿ ಅಧ್ಯಕ್ಷ ಮೊಹಮ್ಮದ್ ಅರ್ಷಾದ್ ಹುಸೇನ್ ಸೇರಿದಂತೆ ಹಲವು ನಾಯಕರು ವಿಲೀನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಿಜೆಪಿ-ಕಾಂಗ್ರೆಸ್ ಒಂದೇ...
ಜೆಡಿಎಸ್‌ಗೆ ಹೊಸ ಮುಖಗಳನ್ನು ಬರ ಮಾಡಿಕೊಂಡು ಮಾತನಾಡಿದ ಗೌಡರು, ಬಿಜೆಪಿ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ನಮ್ಮ ಪಕ್ಷ ಹಾಗಲ್ಲ. ನಾವು ಬಿಹಾರದ ಬಡವರ, ರೈತರ, ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರವಾಗಿರುತ್ತೇವೆ ಎಂದರು.

ಅಲ್ಲದೆ ಫ್ಯಾಸಿಸ್ಟ್ ಮತ್ತು ಕೋಮು ಶಕ್ತಿಗಳನ್ನು ಸದೆ ಬಡಿಯಲು ಎಲ್ಲಾ ಜಾತ್ಯತೀತ ಶಕ್ತಿಗಳು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿರುವ ಮಾಜಿ ಪ್ರಧಾನಿ, ಉತ್ತರ ಭಾರತದಲ್ಲಿ ತನ್ನ ಪಕ್ಷದ ಪುನಶ್ಚೇತನದ ಆರಂಭವಿದು ಎಂದಿದ್ದಾರೆ.

ಅದೇ ಹೊತ್ತಿಗೆ ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷವು ಕೇವಲ ಸ್ಪರ್ಧೆ ಮಾಡಲಷ್ಟೇ ಸ್ಪರ್ಧಿಸುತ್ತಿಲ್ಲ, ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸ್ಪರ್ಧಿಸುತ್ತಿದೆ. ಎಷ್ಟು ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತದೆ ಎಂಬುದನ್ನು ಚರ್ಚೆ ನಡೆಸಿದ ಬಳಿಕ ನಿರ್ಧರಿಸಲಾಗುತ್ತದೆ. ತನ್ನ ಬಿಹಾರದ ಪ್ರಣಾಳಿಕೆಯನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ