ಸಚಿವ ಪ್ರಫುಲ್ ವಶಕ್ಕೆ ತೆಗೆದುಕೊಂಡ ಅಮೆರಿಕಾ, ಕ್ಷಮೆಯಾಚನೆ
ನವದೆಹಲಿ, ಬುಧವಾರ, 29 ಸೆಪ್ಟೆಂಬರ್ 2010( 12:47 IST )
ಭಾರತದ ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಅವರನ್ನು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಅಮೆರಿಕಾದ ವಲಸೆ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವ ಮೂಲಕ ತಮ್ಮ ಉದ್ಧಟತನದ ವರ್ತನೆಯನ್ನು ಮುಂದುವರಿಸಿದ್ದಾರೆ. ಆದರೆ ತಪ್ಪಿನ ಅರಿವಾದ ಮೇಲೆ ಅಮೆರಿಕಾ ಕ್ಷಮೆ ಯಾಚಿಸಿದೆ.
ಖಾಸಗಿ ಪ್ರವಾಸ ನಿಮಿತ್ತ ಚಿಕಾಗೋದಲ್ಲಿರುವ ಸಚಿವ ಪಟೇಲ್ ಕೆನಡಾದ ಮೋಂಟ್ರಿಯಲ್‌ಗೆ ಅಧಿಕೃತ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಚಿಕಾಗೋ ಒಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಸಂಕಷ್ಟದ ಪರಿಸ್ಥಿತಿ ಎದುರಿಸಿದರು.
ಇದಕ್ಕೆ ಕಾರಣ ಸಚಿವರ ಹೆಸರು ಮತ್ತು ಹುಟ್ಟಿದ ದಿನಾಂಕವು ಅಮೆರಿಕಾದ ವಾಚ್ ಲಿಸ್ಟ್‌ನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಹೊಂದಾಣಿಕೆಯಾಗಿದ್ದುದು. ಇದನ್ನೇ ಮುಂದಿಟ್ಟುಕೊಂಡ ಅಮೆರಿಕಾ ವಲಸೆ ಅಧಿಕಾರಿಗಳು, ಸಚಿವರು ಈ ಹಿಂದೆ ಅಮೆರಿಕಾಕ್ಕೆ ಭೇಟಿ ನೀಡಿದ ವಿವರಗಳನ್ನು ಪ್ರಶ್ನಿಸಿದ್ದರು.
ಶಂಕಿತ ವ್ಯಕ್ತಿಯೊಬ್ಬನ ವಿವರಗಳ ಜತೆ ಭಾರತದ ಸಚಿವರ ದಾಖಲೆಗಳು ಹೊಂದಾಣಿಕೆಯಾಗಿರುವ ಏಕೈಕ ಕಾರಣಕ್ಕೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರುವ ಕ್ರಮ ಬಹಿರಂಗವಾಗುತ್ತಿದ್ದಂತೆ ಅಮೆರಿಕಾ ಗೃಹ ಇಲಾಖೆಯು ಪಟೇಲ್ ಅವರಲ್ಲಿ ಕ್ಷಮೆ ಯಾಚಿಸಿದೆ.
ಇಂತಹ ಪ್ರಮಾದಗಳು ಮುಂದಿನ ದಿನಗಳಲ್ಲಿ ನಡೆಯದಂತೆ ನಿಯಮಾವಳಿಗಳಲ್ಲಿ ಸೂಕ್ತ ತಿದ್ದುಪಡಿಗಳನ್ನು ಅಮೆರಿಕಾ ಮಾಡಲಿದೆ ಎಂದು ಗೃಹ ಇಲಾಖೆಯ ಕಾರ್ಯದರ್ಶಿ ಜಾನೆಟ್ ನೆಪೋಲಿಟಾನೋ ಹೇಳಿದ್ದಾರೆಂದು ಭಾರತದ ನಾಗರಿಕ ವಾಯುಯಾನ ಸಚಿವಾಲಯವು ತಿಳಿಸಿದೆ.
ಘಟನೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ ಎಂದು ಇದರ ಕುರಿತು ಸಚಿವ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನೀಗ ಮೋಂಟ್ರಿಯಲ್‌ನಲ್ಲಿದ್ದೇನೆ. ಅಂತಹ ಗಂಭೀರ ವಿಚಾರಗಳೇನೂ ನಡೆದಿಲ್ಲ. ಅವರ ಪಟ್ಟಿಯಲ್ಲಿ ನನ್ನದೇ ಹೆಸರು ಮತ್ತು ಹುಟ್ಟಿದ ದಿನಾಂಕವುಳ್ಳ ವ್ಯಕ್ತಿಯೊಬ್ಬನಿದ್ದ. ಹಾಗಾಗಿ ಅವರು ಎರಡೆರಡು ಬಾರಿ ಪರಿಶೀಲನೆ ನಡೆಸಿದರು ಎಂದು ತಿಳಿಸಿದರು.