ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೌದು, ಕಾಶ್ಮೀರ ಕುರಿತ ಪಾಕಿಸ್ತಾನ ತಂತ್ರ ಸಫಲವಾಗುತ್ತಿದೆ (Kashmir | Pakistan | SM Krishna | India)
Bookmark and Share Feedback Print
 
ಪಾಕಿಸ್ತಾನಕ್ಕೆ ಬೇಕಿರುವುದು ಅದೇ ಆಗಿತ್ತು. ಅಂತಹ ಒಂದು ಗುರಿಯನ್ನಿಟ್ಟುಕೊಂಡೇ ಪರೋಕ್ಷವಾಗಿ ಕಾಶ್ಮೀರದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಷಣ ಬಿಗಿಯುತ್ತಿದೆ. ತಡವಾಗಿ ಎಚ್ಚೆತ್ತುಕೊಂಡಿರುವ ಭಾರತ ಅದನ್ನು ಕೇವಲ 'ಹೇಳಿಕೆ'ಗಳ ಮೂಲಕ ವಿರೋಧಿಸುತ್ತಿದೆ.

ವಿಶ್ವಸಂಸ್ಥೆಯ ಮಹಾ ಅಧಿವೇಶನಕ್ಕಾಗಿ ಅಮೆರಿಕಾದಲ್ಲಿರುವ ಎರಡೂ ದೇಶದ ಪ್ರತಿನಿಧಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಕಾಶ್ಮೀರದ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಪುಂಖಾನುಪುಂಖ ಹೇಳಿಕೆಗಳನ್ನು ನೀಡುತ್ತಿದ್ದರೆ, ಅದರ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಜಾಗರೂಕತೆಯಿಂದ ಆಯ್ದ ಪದಗಳನ್ನು ಬಳಸಿ ಟೀಕಿಸುತ್ತಿದ್ದಾರೆ.

ದಕ್ಷಿಣ ಏಷಿಯಾದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ. ಭಾರತ ಸರಕಾರವು ಕಾಶ್ಮೀರಿಗಳನ್ನು ತುಚ್ಛವಾಗಿ ಕಾಣುತ್ತಿದೆ. ಅಲ್ಲಿ ಮಾನವ ಹಕ್ಕುಗಳ ಭಾರೀ ಉಲ್ಲಂಘನೆ ನಡೆಯುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಸಮುದಾಯವು ಗಂಭೀರವಾಗಿ ಪರಿಗಣಿಸಬೇಕು. ಅಮೆರಿಕಾವು ಮಧ್ಯಪ್ರವೇಶಿಸಬೇಕು. ಜಮ್ಮು-ಕಾಶ್ಮೀರ ತನ್ನ ಅವಿಭಾಜ್ಯ ಅಂಗ ಎಂಬ ಭಾವನೆಯನ್ನು ಭಾರತ ಕೈ ಬಿಡಬೇಕು ಎಂದೆಲ್ಲಾ ಖುರೇಷಿ ವಿಶ್ವಸಂಸ್ಥೆಯ ಅಧಿವೇಶನ ಸೇರಿದಂತೆ ಅಮೆರಿಕಾದ ಸಿಕ್ಕಸಿಕ್ಕ ವೇದಿಕೆಗಳಲ್ಲಿ ಅಲವತ್ತುಕೊಂಡಿದ್ದರು.

ಇತ್ತೀಚಿನವರೆಗೂ ಕಾಶ್ಮೀರದಲ್ಲಿ ಬಹುತೇಕ ಶಾಂತಿಯೇ ನೆಲೆಸಿತ್ತು. ಆದರೆ ಇದನ್ನು ಕದಡಿಸುವ ಸಲುವಾಗಿ ತನ್ನ ಎಂದಿನ 'ಉಗ್ರಾಸ್ತ್ರ'ವನ್ನು ಬದಿಗಿಟ್ಟ ಪಾಕಿಸ್ತಾನ, ಪ್ರತ್ಯೇಕತಾವಾದಿಗಳನ್ನು ಬಳಸಿಕೊಂಡು ಪ್ರತಿಭಟನೆ ಎಂಬ ಹಿಂಸಾತ್ಮಕ ವಿಧಾನವನ್ನು ಅನುಸರಿಸಿತು. ಆ ಮೂಲಕ ಜನತೆ ಮುಗಿಬೀಳುತ್ತಿರುವುದನ್ನು ಅಂತಾರಾಷ್ಟ್ರೀಯ ಸಮುದಾಯ ಗಮನಿಸಲಿ ಎನ್ನುವುದು ಪಾಕ್ ಕುತಂತ್ರವಾಗಿತ್ತು. ಅದರ ಮುಂದಿನ ಭಾಗವಾಗಿ ಇದೀಗ ವಿಶ್ವ ಸಮುದಾಯದ ಗಮನ ಸೆಳೆಯಲು ಆ ದೇಶ ಯತ್ನಿಸುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಕೃಷ್ಣ, ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳನ್ನು ಮುಚ್ಚಿ ಹಾಕುವ ಸಲುವಾಗಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುತ್ತಾ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬೇಕು ಎಂಬ ಖುರೇಷಿಯವರ ಹೇಳಿಕೆಗೆ ತನ್ನ ಭಾಷಣದ ಸಂದರ್ಭದಲ್ಲಿ ಖಾರ ಪ್ರತಿಕ್ರಿಯೆ ನೀಡಿರುವ ಕೃಷ್ಣ, ಭಾರತವು ರಾಜ್ಯದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣಾ ವಿಧಾನದಲ್ಲಿ ಜನಮತಗಣನೆ ನಡೆಸುತ್ತಾ ಬಂದಿದೆ. ಇಲ್ಲಿ ಮತ ಚಲಾಯಿಸದಂತೆ ಕಾಶ್ಮೀರಿಗಳನ್ನು ತಡೆಯುತ್ತಿರುವುದು ಪ್ರತ್ಯೇಕತಾವಾದಿಗಳು ಎಂದರು.

ಭಾರತದ ರಾಜ್ಯ ಜಮ್ಮು-ಕಾಶ್ಮೀರದ ಬಗ್ಗೆ ಪಾಕ್ ವಿದೇಶಾಂಗ ಸಚಿವ ಖುರೇಷಿಯವರು ವಿಶ್ವಸಂಸ್ಥೆಯಲ್ಲಿನ ತನ್ನ ಭಾಷಣದ ಸಂದರ್ಭದಲ್ಲಿ ಮಾಡಿರುವ ಉಲ್ಲೇಖಗಳು ಸ್ವೀಕಾರಾರ್ಹವಲ್ಲ ಮತ್ತು ಅದು ಸಂಪೂರ್ಣವಾಗಿ ಅಪದ್ಧವಾಗಿದೆ ಎಂದು ಕೃಷ್ಣ ಅಭಿಪ್ರಾಯಪಟ್ಟರು.

ಪಾಕಿಸ್ತಾನವು ಅಗಾಧ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಕಾಶ್ಮೀರದಂತಹ ಅನಗತ್ಯ ಮತ್ತು ಅಸಮರ್ಥನೀಯ ವಿಚಾರಗಳನ್ನು ಮುಂದಿಟ್ಟುಕೊಂಡು ತನ್ನಲ್ಲಿನ ಸಮಸ್ಯೆಗಳ ಕುರಿತ ಗಮನವನ್ನು ಬೇರೆಡೆಗೆ ಸೆಳೆಯುವ ಅದರ ಯತ್ನ ಸಫಲವಾಗದು. ಆ ದೇಶವು ತನ್ನ ಪ್ರಜೆಗಳ ಹಿತಕ್ಕಾಗಿ ಮತ್ತು ಪ್ರಾಂತ್ಯದ ಹಿತಕ್ಕಾಗಿ ಶ್ರಮಿಸಲಿ ಎಂದು ಸಚಿವರು ಸಲಹೆ ನೀಡಿದರು.

ಅದೇ ಹೊತ್ತಿಗೆ ಪಾಕ್ ವಿದೇಶಾಂಗ ಸಚಿವರ ಜತೆ ಅಮೆರಿಕಾದಲ್ಲಿ ಮಾತುಕತೆ ನಡೆಸುವ ಸಾಧ್ಯತೆಗಳನ್ನು ಕೃಷ್ಣ ತಳ್ಳಿ ಹಾಕಿದ್ದಾರೆ. ಅಂತಹ ಯಾವುದೇ ವೇಳಾಪಟ್ಟಿಯನ್ನು ನಾವು ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ