ಭೂಗತ ಪಾತಕಿ, ಭಯೋತ್ಪಾದಕ ದಾವೂದ್ ಇಬ್ರಾಹಿಂನ ಮೂವರು ಕುಖ್ಯಾತ ಬಂಟರ ಜತೆ ಮಹಾರಾಷ್ಟ್ರದ ಗೃಹಸಚಿವ ಆರ್.ಆರ್. ಪಾಟೀಲ್ ಈದ್ ಹಬ್ಬವನ್ನು ಆಚರಿಸಿದ್ದಾರೆ. ವರದಿ ಬಹಿರಂಗವಾಗುತ್ತಿದ್ದಂತೆ ಆರೋಪವನ್ನು ಅವರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ತಳ್ಳಿ ಹಾಕಿದೆ.
PR
ರಾಜಕೀಯ ಮತ್ತು ಭೂಗತ ಲೋಕದ ನಂಟೇನೂ ಹೊಸತಲ್ಲಿ. ಅದರಲ್ಲೂ ಮಹಾರಾಷ್ಟ್ರದ ಸಚಿವರುಗಳಿಗೆ ಇದು ಮಾಮೂಲಿ ಸಂಗತಿ. ಅದೇ ರೀತಿ ಭೂಗತ ವ್ಯಕ್ತಿಗಳೊಂದಿಗೆ ಕೂತು, ಸಮ್ಮಾನ ಸ್ವೀಕರಿಸಿದ ಕ್ಷಣಗಳನ್ನು ಸೆರೆ ಹಿಡಿದು ಹೊರಜಗತ್ತಿಗೆ ಬಹಿರಂಗಪಡಿಸಿರುವುದು 'ಸಿಎನ್ಎನ್-ಐಬಿಎನ್' ಸುದ್ದಿವಾಹಿನಿ. ವೀಡಿಯೋ ತುಣುಕುಗಳ ಸಾಕ್ಷಿ ಸಮೇತ ಈ ವಾಹಿನಿ ವರದಿ ಮಾಡಿದೆ.
ದಾವೂದ್ ಇಬ್ರಾಹಿಂನ ಕುಖ್ಯಾತ ಸಹಚರ ಸಲೀಂ ಪಟೇಲ್ ಜತೆ ಸಚಿವ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಈ ಪಟೇಲ್ ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದವ. ಮತ್ತೊಬ್ಬ ಕ್ರಿಮಿನಲ್, ಬಿಜೆಪಿ ಶಾಸಕ ಪ್ರೇಮ್ ಕುಮಾರ್ ಶರ್ಮಾರ ಶಂಕಿತ ಹಂತಕ ಮೋಬಿನ್ ಖುರೇಷಿ ಎಂಬಾತನ ಜತೆ ಕೂತು ಸಮಾಲೋಚನೆ ಮಾಡಿದ್ದಾರೆ.
ಸಚಿವರ ಜತೆ ಕಾಣಿಸಿಕೊಂಡಿರುವ ಮತ್ತೊಬ್ಬ ಕುಖ್ಯಾತ ಬಿಲ್ಡರ್ ಇರ್ಫಾನ್ ಖುರೇಷಿ. ಈತನಿಂದ ಪುಷ್ಪಗುಚ್ಚವನ್ನು ನಗುನಗುತ್ತಾ ಪಾಟೀಲ್ ಸ್ವೀಕರಿಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀಮ್ ಸಿದ್ಧಿಕಿ ಎಂಬವರು ತನ್ನ ಮುಂಬೈಯಲ್ಲಿನ ಮನೆಯಲ್ಲಿ ಈದ್ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಕುಖ್ಯಾತ ಕ್ರಿಮಿನಲ್‌ಗಳನ್ನು ಸಚಿವರು ಭೇಟಿಯಾಗಿದ್ದರು.
ಆದರೆ ಸಚಿವ ಪಾಟೀಲ್ ತಾನು ಮುಗ್ಧ, ಅಮಾಯಕ ಎಂದು ಹೇಳಿಕೊಂಡಿದ್ದಾರೆ.
ಆ ಪಾರ್ಟಿಯಲ್ಲಿ ಯಾರೆಲ್ಲ ಭಾಗವಹಿಸಿದ್ದರೆಂಬುದು ನನಗೆ ತಿಳಿದಿರಲಿಲ್ಲ. ಪೊಲೀಸರು ಅಥವಾ ನನ್ನ ಸಚಿವಾಲಯವೂ ಇದರ ಕುರಿತು ಮಾಹಿತಿ ನೀಡಿರಲಿಲ್ಲ. ಅಂತವರು ಅಲ್ಲಿದ್ದಾರೆ ಎಂಬುದು ನನಗೆ ತಿಳಿದಿರುತ್ತಿದ್ದರೆ ನಾನು ಅಲ್ಲಿರುತ್ತಿರಲಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀಮ್ ಸಿದ್ಧಿಕಿಯವರು ಕೂಡ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಸಚಿವ ಪಾಟೀಲ್ ಅವರು ಈದ್ ನಿಮಿತ್ತ ನನ್ನ ಮನೆಗೆ ಬಂದಿದ್ದರು. ಅದು ಪಾರ್ಟಿ ಆಗಿರಲಿಲ್ಲ ಮತ್ತು ಇರ್ಫಾನ್ ಖುರೇಷಿ ಎಲ್ಲರಿಗೂ ಗೊತ್ತಿರುವ ಜನಪ್ರಿಯ ಬಿಲ್ಡರ್. ಆ ಇಬ್ಬರು ವ್ಯಕ್ತಿಗಳು ಕೂಡ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ. ಆ ದಿನ ನನ್ನ ಮನೆಯಲ್ಲಿ 300ರಷ್ಟು ಮಂದಿ ಅತಿಥಿಗಳಿದ್ದರು. ಹಾಗಾಗಿ ಸಲೀಂ ಎಂಬಾತ ಯಾರು ಎಂಬುದು ನನಗೆ ಗೊತ್ತಿಲ್ಲ. ಆತ ಕ್ರಿಮಿನಲ್ ಎಂದು ಗೊತ್ತಿದ್ದರೆ ನಾನು ಪಾರ್ಟಿಗೆ ಆಹ್ವಾನಿಸುತ್ತಿರಲಿಲ್ಲ. ಇದು ಪಿತೂರಿಯಾಗಿದ್ದು, ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ನಾನು ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.