ಕಾಶ್ಮಿರದಲ್ಲಿರುವ ಸಾಂಗ್‌ಬಾಝ್ ತೆಹರಿಕ್ ಸಂಘಟನೆ ಪಾಕಿಸ್ತಾನ ಬೆಂಬಲಿತ ಪ್ರತ್ಯಕತಾವಾದಿಗಳಿಗೆ ಎಚ್ಚರಿಕೆಯನ್ನು ನೀಡಿದ್ದು, ಕಾಶ್ಮಿರ ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿದ್ದಲ್ಲ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದೆ.
ವಿಶ್ವಸಂಸ್ಥೆ, ಕಾಶ್ಮಿರಿಗಳಿಗೆ ಎರಡು ಆಯ್ಕೆಗಳನ್ನು ನೀಡಿದ್ದು, ಒಂದೋ ಭಾರತದ ಆಧೀನದಲ್ಲಿರಬೇಕು ಅಥವಾ ಪಾಕಿಸ್ತಾನದಲ್ಲಿ ಸೇರ್ಪಡೆಯಾಗಬೇಕು. ಆದರೆ, ಪ್ರತಿಭಟನಾಕಾರರು ಸ್ವಾತಂತ್ರ್ಯಕ್ಕಿಂತ ಕಡಿಮೆ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಪಾಕಿಸ್ತಾನಕ್ಕೆ ಸೇರ್ಪಡೆಯಾಗಲು ಬಯಸುವುದಿಲ್ಲ. ಭಾರತದ ಜೊತೆಯಿರಲು ಸಾಧ್ಯವಿಲ್ಲ ಎಂದು ಸಾಂಗ್‌ಬಾಝ್ ತೆಹರಿಕ್ ಸಂಘಟನೆಯ ಸಯ್ಯದ್ ಅಲಿ ಆಘಾ ಘೋಷಿಸಿದ್ದಾರೆ.
ಹುರಿಯತ್ ಮುಖಂಡ ಸಯ್ಯದ್ ಅಲಿ ಶಾ ಗಿಲಾನಿ, ಕಳೆದ ತಿಂಗಳು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಂತೆ ಕರೆ ನೀಡಿದ್ದರು. ಸಾಂಗ್‌ಬಾಝ್ ತೆಹರಿಕ ಸಂಘಟನೆಯ ಸದಸ್ಯರು ಗಿಲಾನಿ ಮನೆಗೆ ತೆರಳಿ ಕಲ್ಲು ತೂರಾಟ ನಡೆಸಿ, ಗಿಲಾನಿ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ಮತ್ತೊಬ್ಬ ಹುರಿಯತ್ ನಾಯಕ ಮಿರ್ವೈಝ್ ಉಮರ್ ಫಾರೂಕ್ ಮಾತನಾಡಿ,ಕಾಶ್ಮಿರದ ಯುವಕರಿಗೆ ನಾಯಕರಿಲ್ಲದಿರಬಹುದು. ಆದರೆ, ಯುವಕರು ಸ್ಪಷ್ಟ ಗುರಿಯನ್ನು ಹೊಂದಿದ್ದಾರೆ. ಅದು ಸ್ವಾತಂತ್ರ್ಯವಾಗಿದೆ ಎಂದು ಹೇಳಿದ್ದಾರೆ.
ಕಾಶ್ಮಿರಿ ಪ್ರತಿಭಟನಾಕಾರರು ಸ್ವಾತಂತ್ರ್ಯ ಬಯಸುತ್ತಿದ್ದಾರೆಯೇ ಹೊರತು ಭಾರತ ಅಥವಾ ಪಾಕಿಸ್ತಾನದೊಂದಿಗೆ ಸೇರಲು ಬಯಸುವುದಿಲ್ಲ ಎಂದು ಸಾಂಗ್‌ಬಾಜ್ ತೆಹರಿಕ್ ಸಂಘಟನೆ ಮುಖ್ಯಸ್ಥ ಸಯ್ಯದ್ ಅಲಿ ಆಘಾ ತಿಳಿಸಿದ್ದಾರೆ.