13ರ ಹರೆಯದ ದಲಿತ ಬಾಲಕಿಯೊಬ್ಬಳನ್ನು ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರು ತಿಂಗಳ ನಂತರ ಬಹಿರಂಗವಾಗಿರುವ ಪ್ರಕರಣವಿದು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರ ಹಲವು ಪ್ರಭಾವಿಗಳ ಪುತ್ರರು ಅತ್ಯಾಚಾರಿಗಳಾಗಿದ್ದುದರಿಂದ ಬಲಿಪಶು ದೂರು ನೀಡಲು ಮುಂದಾಗಿರಲಿಲ್ಲ.
ಇದು ನಡೆದಿರುವುದು ಮಧ್ಯಪ್ರದೇಶದ ಮಂಡಲಾ ಜಿಲ್ಲೆಯಲ್ಲಿ. ಆರು ತಿಂಗಳ ಹಿಂದೆಯೇ ಆರು ಮಂದಿ ಯುವಕರು ಸೇರಿಕೊಂಡು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಜತೆಗೆ ಅದನ್ನು ತಮ್ಮ ಮೊಬೈಲುಗಳ ಮೂಲಕ ಚಿತ್ರೀಕರಣ ಮಾಡಿದ್ದರು. ಅದರ ಜಾಡು ಹಿಡಿದ ಪೊಲೀಸರು ಬಲಿಪಶು ಮತ್ತು ಆರೋಪಿಗಳನ್ನು ಗುರುತು ಹಿಡಿದಿದ್ದಾರೆ.
PR
ಇಲ್ಲಿನ ಮೊಹಂತೋಲಾ ಅರಣ್ಯ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೇ ಚಿತ್ರೀಕರಣ ಮಾಡಲಾಗಿದ್ದ ಈ ಎಂಎಸ್ಎಸ್ ತುಣುಕುಗಳಿಗೆ 'ಲೋಕಲ್‌ವಾಲಿ' ಎಂಬ ಹೆಸರನ್ನೂ ಇಡಲಾಗಿತ್ತು.
ವೀಡಿಯೋ ನೋಡಿದ ಪೊಲೀಸರು ಬಲಿಪಶುವನ್ನು ಮೊದಲು ಪತ್ತೆ ಹಚ್ಚಿದರು. ಆಕೆ ನೀಡಿದ ಹೇಳಿಕೆಗಳ ಆಧಾರದಲ್ಲಿ ನಂತರ ಹೆಡ್ ಕಾನ್ಸ್‌ಟೇಬಲ್ ಪುತ್ರ ಸಂದೀಪ್ ಆಹಿರ್ವಾರ್ (21), ಸತ್ಯೇಂದ್ರ ಜಾರಿಯಾ (19) ಮತ್ತು ಸುರೇಂದ್ರ ನಂದಾ (19) ಎಂಬ ಆರೋಪಿಗಳನ್ನು ಬಂಧಿಸಿದರು.
ಮಂಡಲಾದ ಜಿಲ್ಲಾಧಿಕಾರಿ ಪುತ್ರನಾಗಿರುವ ಓಂಪ್ರಕಾಶ್ ಪ್ರಧಾನ್ ತಪ್ಪಿಸಿಕೊಂಡಿದ್ದಾನೆ. ಅಭಿಷೇಕ್ ತಿವಾರಿ ಮತ್ತು ಗೋಪಾಲ್ ಸಾರ್ಥಿ ಎಂಬ ಇನ್ನಿಬ್ಬರು ಆರೋಪಿಗಳು ಕೂಡ ಭೂಗತರಾಗಿದ್ದಾರೆ.
ಪುಸಲಾಯಿಸಿದ್ದ ಧೂರ್ತರು... ನಗರದಿಂದ 20 ಕಿಲೋ ಮೀಟರ್ ದೂರದಲ್ಲಿನ ಗ್ರಾಮವೊಂದರ ನಿವಾಸಿಯಾಗಿರುವ ಬಲಿಪಶು, 13ರ ಹರೆಯದ ದಲಿತ ಹುಡುಗಿ ಆಗಾಗ ನಗರಕ್ಕೆ ಬಂದು ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯುವಕರು ಈಕೆಯ ಸ್ನೇಹ ಗಿಟ್ಟಿಸಿಕೊಂಡಿದ್ದರು.
ಹೀಗೆ ಒಂದು ಬಾರಿ ಮಂಡಲಾಕ್ಕೆಂದು ಬಂದಿದ್ದ ಹೊತ್ತಿನಲ್ಲಿ, ಯುವಕನೊಬ್ಬ ಬೈಕಿನಲ್ಲಿ ಕೂರಿಸುವುದಾಗಿ ಹೇಳಿದ್ದ. ಅದರಂತೆ ಬೈಕಿನಲ್ಲಿ ಕೂತ ನಂತರ ನೇರವಾಗಿ ಅಭಿಷೇಕ್ ತಿವಾರಿ ಎಂಬಾತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗಿತ್ತು.
ಮರುದಿನ ಬೆಳಿಗ್ಗೆ ಆಕೆಯನ್ನು ನಗರದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಮಹಂತೋಲಾ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆರು ಮಂದಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದರು. ಇದನ್ನು ಜತೆಗಿದ್ದವರು ತಮ್ಮ ಮೊಬೈಲ್ ಫೋನ್‌ಗಳಿಂದ ಚಿತ್ರೀಕರಿಸಿದರು.
ಆರು ಮಂದಿ ಆರೋಪಿಗಳಲ್ಲಿ ಓರ್ವ ಮೊಬೈಲ್ ಅಂಗಡಿ ಮಾಲಕ. ಈತ ತಾವು ಎಸಗಿರುವ ಘನಾಂಧಾರಿ ಕಾರ್ಯದ ವೀಡಿಯೋ ತುಣುಕುಗಳನ್ನು ಸಾರ್ವಜನಿಕರ ಮೊಬೈಲುಗಳಿಗೆ ರವಾನಿಸಲಾರಂಭಿಸಿದ್ದ.
ಇದು ಪೊಲೀಸರ ಗಮನಕ್ಕೂ ಬಂತು. ವೀಡಿಯೋ ನೋಡಿದ ಪೊಲೀಸರು ನಿರಂತರ ಹುಡುಕಾಟದ ನಂತರ ಬಲಿಪಶು ಹುಡುಗಿಯನ್ನು ಪತ್ತೆ ಹಚ್ಚಿದರು.
ಈ ಬಗ್ಗೆ ಯಾಕೆ ದೂರು ನೀಡಿಲ್ಲ ಎಂದು ಹುಡುಗಿಯ ಕುಟುಂಬಿಕರಲ್ಲಿ ಪ್ರಶ್ನಿಸಿದಾಗ, 'ಆರೋಪಿಗಳು ಪ್ರಭಾವಿಗಳ ಪುತ್ರರಾಗಿರುವುದರಿಂದ ನಮಗೆ ಅಪಾಯವಾಗಬಹುದು ಎಂದು ಪಕ್ಕದ ಮನೆಯವರು ನಮಗೆ ಸಲಹೆ ನೀಡಿದರು. ಹಾಗಾಗಿ ನಾವು ಅನ್ಯಾಯವನ್ನು ಸಹಿಸಿಕೊಂಡಿದ್ದೇವೆ' ಎಂದಿದ್ದಾರೆ.