ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದಾದ್ಯಂತ 15,000ಕ್ಕೂ ಹೆಚ್ಚು ದುಷ್ಟಶಕ್ತಿಗಳ ಬಂಧನ
(anti-socials arrested | Ayodhya verdict | Maharashtra | Uttar Pradesh)
ಅಯೋಧ್ಯೆ ಒಡೆತನದ ತೀರ್ಪಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುನ್ನೆಚ್ಚೆರಿಕಾ ಕ್ರಮವಾಗಿ ಭಾರೀ ಸಂಖ್ಯೆಯ ದುಷ್ಟ ಶಕ್ತಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಮಹಾರಾಷ್ಟ್ರ ಪೊಲೀಸರು ಮುಂಬೈ, ಪುಣೆ ಸೇರಿದಂತೆ ಹಲವು ನಗರಗಳಲ್ಲಿ ಕನಿಷ್ಠ 7,000 ಮಂದಿಯನ್ನು ಬಂಧಿಸಿದ್ದಾರೆ. ನಿನ್ನೆ 4,000 ಮಂದಿಯನ್ನು ಬಂಧಿಸಿದ್ದರೆ, ಇಂದು 3,000 ಮಂದಿಯನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ 1,200ಕ್ಕೂ ಹೆಚ್ಚು ಮಂದಿಗೆ ನೋಟೀಸ್ ಜಾರಿ ಮಾಡಲಾಗಿದೆ.
PTI
ಅತ್ತ ಮಧ್ಯಪ್ರದೇಶದಲ್ಲಿ 8,000 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಮಾಜ ವಿರೋಧಿ ಶಕ್ತಿಗಳನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಸೋನಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದಲೇ ನಾವು ದುಷ್ಕರ್ಮಿಗಳನ್ನು ಬಂಧಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೆವು. ಈ ಹಿಂದಿನ ಕೃತ್ಯಗಳ ದಾಖಲೆಗಳನ್ನು ಗಮನಿಸಿ, ದುಷ್ಟಶಕ್ತಿಗಳನ್ನು ನಿಯಂತ್ರಿಸುವ ಕೆಲಸಕ್ಕೆ ನಾವು ಕೈ ಹಾಕಿದ್ದೇವೆ. ಆ ನಿಟ್ಟಿನಲ್ಲಿ ಹಲವರನ್ನು ಬಂಧಿಸಲಾಗಿದೆ ಎಂದು ಅಶೋಕ್ ವಿವರಣೆ ನೀಡಿದ್ದಾರೆ.
ಮಧ್ಯಪ್ರದೇಶದ ಮಾಲ್ವಾ ಪ್ರಾಂತ್ಯದ ಭೋಪಾಲ್, ಜಬಲ್ಪುರ್ ಮತ್ತು ಸಾಗರ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಅಯೋಧ್ಯೆಯಲ್ಲಿನ ವಿವಾದಿತ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಜಮೀನು ಇರುವ ಉತ್ತರ ಪ್ರದೇಶ ಸರಕಾರವೂ ಇಂತಹುದೇ ಕ್ರಮಕ್ಕೆ ಮುಂದಾಗಿದೆ. ಅಯೋಧ್ಯೆ ವಿವಾದದಲ್ಲಿ ಅತಿ ಹೆಚ್ಚು ನಲುಗಿರುವ ರಾಜ್ಯವಿದು. ಹಾಗಾಗಿ ಮುನ್ನೆಚ್ಚೆರಿಕಾ ಕ್ರಮವಾಗಿ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಈ ಕುರಿತು ಅಲ್ಲಿನ ಸರಕಾರ ಅಥವಾ ಪೊಲೀಸ್ ಇಲಾಖೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಉತ್ತರ ಪ್ರದೇಶದ ಅಯೋಧ್ಯೆ, ವಾರಣಾಸಿ ಮತ್ತು ಮಥುರಾ ಸೇರಿದಂತೆ ಎಲ್ಲಾ ಸೂಕ್ಷ್ಮ ಪ್ರದೇಶ ಮತ್ತು ಜಿಲ್ಲೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದ್ದಾರೆ. ಸರಕಾರ ಇಲ್ಲಿನ 25 ಜಿಲ್ಲೆಗಳು ಮತ್ತು ಇತರ 19 ಪ್ರದೇಶಗಳು ಅತಿ ಸೂಕ್ಷ್ಮವೆಂದು ಗುರುತಿಸಿದೆ.
ಉತ್ತರ ಪ್ರದೇಶವೊಂದರಲ್ಲೇ ರಾಜ್ಯ ಮತ್ತು ಕೇಂದ್ರದ ಒಟ್ಟಾರೆ 1.90 ಲಕ್ಷ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ಭಾರೀ ಭದ್ರತೆ ಮಾಡಲಾಗಿದೆ.
ಕರ್ನಾಟಕದದಲ್ಲಿ 750ಕ್ಕೂ ಹೆಚ್ಚು ಸಮಾಜ ಘಾತುಕ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಗೃಹಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪ್ರಚೋದನಾಕಾರಿ ಸಂದೇಶ; ಹಲವರ ಸೆರೆ ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ಗೆಳೆಯರಿಗೆ ಉದ್ರೇಕಕಾರಿ ಎಸ್ಎಂಎಸ್ ಸಂದೇಶಗಳನ್ನು ರವಾನಿಸಿದ ಕೇರಳದ ಕೊಲ್ಲಂ ಜಿಲ್ಲೆಯ ಒಚಿರಾ ಎಂಬಲ್ಲಿ ನಾಲ್ಕು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಜಯಕುಮಾರ್, ಸುಭಾಷ್, ಮನು ಮತ್ತು ಜಿಜೋ ಎಂಬವರೇ ಈ ಯುವಕರು. ಪ್ರಚೋದನಾಕಾರಿ ಸಂದೇಶಗಳ ಮೇಲೆ ಸರಕಾರವು ನಿಷೇಧ ಹೇರಿರುವ ಹೊರತಾಗಿಯೂ ಇವರು ಜನರನ್ನು ಪ್ರಚೋದಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಬಂಧಿಸಲಾಗಿದೆ.