ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠವು ನೀಡಿರುವ ತೀರ್ಪು ಯಾರ ಗೆಲುವೂ ಅಲ್ಲ, ಯಾರ ಸೋಲು ಅಲ್ಲ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ಗಳು, ರಾಮಮಂದಿರ ನಿರ್ಮಾಣಕ್ಕೆ ತೀರ್ಪಿನಿಂದಾಗಿ ಹಾದಿ ಸುಗಮವಾದಂತಾಗಿದೆ ಮತ್ತು ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಪ್ರತಿಕ್ರಿಯಿಸಿದೆ.
ನ್ಯಾಯಾಲಯ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲೇ ಎಂಬ 100 ಕೋಟಿ ಹಿಂದೂಗಳ ನಂಬಿಕೆಯನ್ನು ನ್ಯಾಯಾಂಗವು ಕೂಡ ದೃಢಪಡಿಸಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ವಿವಾದಿತ ಸ್ಥಳದಲ್ಲಿ ಭವ್ಯ ರಾಮಮಂದಿರ ಮಂದಿರ ಕಟ್ಟಲು ಹಾದಿ ಸುಗಮವಾದಂತಾಗಿದೆ ಎಂದರು.
ಈ ತೀರ್ಪು ಯಾರ ಗೆಲುವು ಅಥವಾ ಯಾರ ಸೊಲು ಅಲ್ಲ ಎಂದು ಹೇಳಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗ್ವತ್. ನಾವು ಮುಸ್ಲಿಮರೂ ಸೇರಿದಂತೆ ಪ್ರತಿಯೊಬ್ಬರನ್ನೂ ಮಂದಿರ ನಿರ್ಮಾಣಕ್ಕಾಗಿ ಸಹಕರಿಸಲು ಆಹ್ವಾನಿಸುತ್ತೇವೆ ಎಂದು ಭಾಗ್ವತ್ ತಿಳಿಸಿದ್ದಾರೆ.
ನ್ಯಾಯಾಲಯದ ತೀರ್ಪಿನಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಾದಿ ಸುಗಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯದ ತೀರ್ಪು ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ನಿರ್ದಿಷ್ಟ ಧರ್ಮದ ಪರವಾಗಿಲ್ಲ. ಈ ತೀರ್ಪನ್ನು ಯಾವುದೇ ಸಂಸ್ಥೆ ಅಥವಾ ಯಾರದೇ ಗೆಲುವು ಅಥವಾ ಸೋಲೆಂದು ಪರಿಗಣಿಸಬಾರದು. ತೀರ್ಪನ್ನು ಗೌರವಿಸಬೇಕು ಮತ್ತು ಶಾಂತಿ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕೆಂದು ನಾನು ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾಗ್ವತ್ ತಿಳಿಸಿದ್ದಾರೆ.
ತೀರ್ಪಿನಿಂದ ಸಂತಸಗೊಂಡಿರುವುದಾಗಿ ಹೇಳಿರುವ ಅವರು, ಜಾತ್ಯತೀತ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಇದು ಹಿಂದೂಗಳ ನಂಬಿಕೆಯ ವಿಚಾರ ಎಂದು ನಾವು ಇದನ್ನು ಪರಿಗಣಿಸುತ್ತೇವೆ. ಹಾಗಾಗಿ ನಾನು ಎಲ್ಲಾ ಸಂತರು, ಭಾರತದ ಜನತೆ ಮತ್ತು ಮುಸ್ಲಿಮರನ್ನು ಕೂಡ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಆಹ್ವಾನಿಸುತ್ತೇನೆ ಎಂದರು.