ಆಕೆ ಜನ್ಮತಃ ಹಿಂದೂ, ಈಗ ಕಟ್ಟರ್ ಮುಸ್ಲಿಂ. ಅಷ್ಟೇ ಅಲ್ಲ ಮದ್ರಸಾ ಶಿಕ್ಷಕಿ. ವಿಶೇಷವೆಂದರೆ ಆಕೆಯ ಪುತ್ರ ಹಿಂದೂ ಧರ್ಮವನ್ನೇ ಪಾಲಿಸುತ್ತಿರುವುದು. ಇದರೊಂದಿಗೆ ಭಾರತದಲ್ಲಿ ಧರ್ಮವೆನ್ನುವುದು ಮಾನವನ ಎಲ್ಲೆಗಳನ್ನು ಮೀರಿದ್ದಲ್ಲ ಎಂಬುದು ಸಾಬೀತಾಗಿದೆ.
ಸ್ವರ್ಣಮಾಲ ಆಲಿಯಾಸ್ ಸೆಲ್ಮಾ ಎಂಬ 61ರ ವೃದ್ಧೆಯೇ ಈ ಮದ್ರಸಾ ಶಿಕ್ಷಕಿ. ತಮಿಳುನಾಡಿನ ಸೇಲಂನ ಶ್ರೀ ಶಾರದಾ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಶಿಕ್ಷಕಿಯಾಗಿದ್ದ ಅವರು, ಪ್ರಸಕ್ತ ಕಟ್ಟರ್ ಮುಸ್ಲಿಂ. ಅದು ಎಷ್ಟೆಂದರೆ ಇಸ್ಲಾಂ ಧರ್ಮದಲ್ಲಿ ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ವಿಧಿಸಿರುವ ಕಟ್ಟುಪಾಡುಗಳನ್ನು ಅನುಸರಿಸುವಷ್ಟು.
ಆಕೆ ಶಿಕ್ಷಕಿಯಾಗಿರುವ ಮದ್ರಸಾದಲ್ಲಿ ಮಹಿಳಾ ಶಿಕ್ಷಕಿಯರು ಅಥವಾ ವಿದ್ಯಾರ್ಥಿಗಳನ್ನು ಯಾರೊಬ್ಬರೂ ನೇರವಾಗಿ ಸಂಪರ್ಕಿಸುವಂತಿಲ್ಲ. ಪುರುಷ ಶಿಕ್ಷಕರು ಇಲ್ಲಿ ಶಿಕ್ಷಕಿಯರ ಅಥವಾ ವಿದ್ಯಾರ್ಥಿಗಳ ಜತೆ ಸಂವಾದ ಅಥವಾ ಮಾತುಕತೆ ನಡೆಸುವುದಿದ್ದರೆ ಅದು ಗೋಡೆಯಲ್ಲಿನ ತೂತಿನ ಮೂಲಕ ಮಾತ್ರ ಸಾಧ್ಯ.
ಇದು ಸ್ವತಃ ವರದಿಗೆ ತೆರಳಿದವರಿಗೂ ಅನುಭವವಾಗಿದೆ. ಸ್ವರ್ಣಮಾಲ ವರದಿಗಾರರ ಜತೆ ನೇರವಾಗಿ ಮಾತುಕತೆಗೆ ಮುಂದಾಗದೆ, ಗೋಡೆಯ ಆಚೆ ಬದಿಯಿಂದ ತೂತಿನ ಮೂಲಕವಷ್ಟೇ ಮಾತನಾಡಿದ್ದಾರೆ.
ಅದೇ ಹೊತ್ತಿಗೆ ಇಸ್ಲಾಂ ಸೆಲ್ಮಾ ಅವರಿಗೆ ಸಂತಸವನ್ನು ನೀಡಿದೆಯಂತೆ. ಮದ್ರಸಾದಲ್ಲಿ ಬೋಧಿಸುವುದು ಕೂಡ ಅವರ ದಿನಚರಿಯಾಗಿ ಬಿಟ್ಟಿದೆ. ಪ್ರಾರ್ಥನೆ ಮತ್ತು ಧ್ಯಾನ ಜೀವನದ ಗುಣಮಟ್ಟವನ್ನು ಬದಲಾಯಿಸಿದೆ ಎಂದು ಇಂಗ್ಲೀಷ್, ತಮಿಳು ಮತ್ತು ಗಣಿತ ವಿಷಯಗಳ ಬೋಧನೆ ಮತ್ತು ಹಾಸ್ಟೆಲ್ ವಾರ್ಡನ್ ಕೂಡ ಆಗಿರುವ ಮದ್ರಸಾ ಶಿಕ್ಷಕಿ ಹೇಳಿದ್ದಾರೆ.
ಮಧುರೈ ಮೂಲದವರಾಗಿರುವ ಸೆಲ್ಮಾ 'ವೆಲ್ಲಾಲ ಪಿಳ್ಳೈ' ಸಮುದಾಯಕ್ಕೆ ಸೇರಿದವರು. ಕೊಡೈಕೆನಾಲ್‌ನಲ್ಲಿ ಅವರ ಕುಟುಂಬವು ಎಸ್ಟೇಟ್ ಕೂಡ ಹೊಂದಿದೆ.
1982ರಲ್ಲಿ ಇತಿಹಾಸ ಶಿಕ್ಷಕಿಯಾಗಿ ಶ್ರೀ ಶಾರದಾ ಕಾಲೇಜು ಸೇರಿದ್ದ ಅವರು ಫಯಾಜ್ ಅಹ್ಮದ್ ಎಂಬವರನ್ನು ಭೇಟಿಯಾಗಿದ್ದರು. ಅವರು ವಸ್ತ್ರೋದ್ಯಮ ನಡೆಸುತ್ತಿದ್ದವರು. ಅಹ್ಮದ್‌ರ ಶಿಸ್ತು ಮತ್ತು ಸಿದ್ಧಾಂತಗಳನ್ನು ಇಷ್ಟಪಟ್ಟ ಸ್ವರ್ಣಮಾಲ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.
ಕುಟುಂಬಕ್ಕೆ ಈ ಮದುವೆ ಇಷ್ಟವಿರಲಿಲ್ಲ. ಹಾಗಾಗಿ ಸಂಬಂಧವನ್ನು ಕಡಿದುಕೊಳ್ಳಲು ಕೂಡ ಸ್ವರ್ಣಮಾಲ ಹಿಂದೆ ಮುಂದೆ ನೋಡಲಿಲ್ಲ. ಜತೆಗೆ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಅದಕ್ಕೆ ಬೇಕಾದ ತರಬೇತಿಗಳನ್ನು ಕೂಡ ಪಡೆದುಕೊಂಡರು.
ಗಂಡ ಫಯಾಜ್ 15 ವರ್ಷಗಳ ಹಿಂದೆಯೇ ಮೃತರಾಗಿದ್ದಾರೆ. ದಂಪತಿಯ ಒಬ್ಬನೇ ಒಬ್ಬ ಪುತ್ರ ರಮೇಶ್ ಬಾಬು ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ ಮಧುರೈನ ಹಿಂದೂ ಯುವತಿಯನ್ನೇ ಮದುವೆಯಾಗಿದ್ದಾರೆ.
ಫಯಾಜ್ ನಿಧನದ ನಂತರ ಸೆಲ್ಮಾ ತನ್ನ ಕಾಲೇಜು ಶಿಕ್ಷಕಿ ಹುದ್ದೆಗೆ ರಾಜೀನಾಮೆ ನೀಡಿ, ಮದ್ರಸಾ ಶಿಕ್ಷಕಿಯಾಗಿ ಪೂರ್ಣಕಾಲಿಕ ಕೆಲಸ ಮಾಡುತ್ತಿದ್ದಾರೆ. ತಾನು ಸಾಯುವವರೆಗೂ ಮದರಸಾ ಶಿಕ್ಷಕಿಯಾಗಿಯೇ ಮುಂದುವರಿಯುತ್ತೇನೆ ಎನ್ನುತ್ತಾರೆ.
ಅಚ್ಚರಿಯ ವಿಚಾರವೆಂದರೆ ಹತ್ತಾರು ವರ್ಷಗಳ ಹಿಂದೆ ಕಡಿದು ಹೋಗಿದ್ದ ಹೆತ್ತವರ ಜತೆಗಿನ ಸಂಬಂಧ ಮತ್ತೆ ಚಿಗುರೊಡೆದಿದೆಯನ್ನುವುದು.