ಮುಸ್ಲಿಮರ ಒಲವು ಗಿಟ್ಟಿಸಲು ಯತ್ನಿಸುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆದ್ದಿದ್ದಾರೆ. ಜೆಡಿಯು ಬೇಡಿಕೆಯಂತೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಚಾರಕ್ಕೆ ಇಳಿಸದೇ ಇರಲು ಬಿಜೆಪಿ ನಿರ್ಧರಿಸಿದೆ.
ಈ ಸಂಬಂಧ ಪಕ್ಷವು ಬಿಡುಗಡೆ ಮಾಡಿರುವ ಪ್ರಚಾರಕರ ಪಟ್ಟಿಯಲ್ಲಿ ಮೋದಿ ಸ್ಥಾನ ಪಡೆದಿಲ್ಲ. ಹಾಗಾಗಿ ಸಂಯುಕ್ತ ಜನತಾದಳವು (ಜೆಡಿಯು) ಕೇಸರಿ ಪಾಳಯದೆದುರು ಮೇಲುಗೈ ಸಾಧಿಸಿದೆ.
ನಿಯಮಾವಳಿಗಳಂತೆ ಬಿಜೆಪಿಯು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ. ಸುಮಾರು 40 ಮುಖಂಡರು ಇದರಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಮೋದಿಯ ಹೆಸರು ಎಲ್ಲೂ ಕಂಡು ಬಂದಿಲ್ಲ ಎಂದು ಮೂಲಗಳು ಹೇಳಿವೆ.
ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ನಿತಿನ್ ಗಡ್ಕರಿ, ಮುರಳಿ ಮನೋಹರ ಜೋಷಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಅನಂತ್ ಕುಮಾರ್ ಮುಂತಾದ ನಾಯಕರ ಹೆಸರುಗಳು ಪಟ್ಟಿಯಲ್ಲಿವೆ.
ಅಕ್ಟೋಬರ್ 21ರಿಂದ ಆರು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಪ್ರಚಾರ ಮಾಡುವ ಪಟ್ಟಿಯಲ್ಲಿ ಬಿಜೆಪಿಯ ಬಿಹಾರದಲ್ಲಿನ ಹಿರಿಯ ನಾಯಕರಾದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ರವಿ ಶಂಕರ್ ಪ್ರಸಾದ್, ರಾಜೀವ್ ಪ್ರತಾಪ್ ರೂಢಿ, ಶಹನಾವಾಜ್ ಹುಸೇನ್ ಮತ್ತು ಸಿ.ಪಿ. ಠಾಕೂರ್ ಕಾಣಿಸಿಕೊಂಡಿದ್ದಾರೆ.
ಎನ್‌ಡಿಎ ಅಂಗಪಕ್ಷವಾಗಿರುವ ಜೆಡಿಯು, ರಾಜ್ಯದಲ್ಲಿ ಮೈತ್ರಿ ಮುಂದುವರಿಸುವ ನಿಟ್ಟಿನಲ್ಲಿ ಮೋದಿಯವರನ್ನು ಪ್ರಚಾರದಿಂದ ದೂರ ಇಡಬೇಕು ಎಂಬ ಷರತ್ತನ್ನು ಮುಂದಿಟ್ಟಿತ್ತು ಎಂದು ಹೇಳಲಾಗಿತ್ತು.
ಗುಜರಾತ್ ಗಲಭೆಗಳಲ್ಲಿ ಖಳನಾಯಕನಾಗಿರುವ ಮೋದಿಯವರನ್ನು ಮುಂದಿಟ್ಟುಕೊಂಡು ಮೈತ್ರಿಪಕ್ಷ ಬಿಜೆಪಿಯು ಬಿಹಾರದಲ್ಲಿ ಪ್ರಚಾರ ನಡೆಸಿದರೆ, ಅದು ತನ್ನ ಜಾತ್ಯತೀತ ಇಮೇಜಿಗೆ ಧಕ್ಕೆಯಾಗಬಹುದು ಎನ್ನುವುದು ಶರದ್ ಯಾದವ್ ನೇತೃತ್ವದ ಪಕ್ಷದ ಅಭಿಪ್ರಾಯವಾಗಿತ್ತು.
ಮೋದಿಯವರನ್ನು ಪ್ರಚಾರಕ್ಕೆ ಇಳಿಸುವ ಕುರಿತು ಪಕ್ಷ ಮುಕ್ತವಾಗಿದೆ ಎಂದಷ್ಟೇ ಹೇಳುತ್ತಾ ಬಂದಿದ್ದ ಬಿಜೆಪಿ ನಾಯಕರು, ನಿತೀಶ್ ಕುಮಾರ್ ಅವರ ಮನವೊಲಿಕೆ ಯತ್ನದಲ್ಲಿ ವಿಫಲರಾಗಿರುವುದರಿಂದ ಕೊನೆಗೂ ತನ್ನ ಪಟ್ಟನ್ನು ಸಡಿಲಿಸಿತು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಬಿಜೆಪಿಯು ಅಕ್ಟೋಬರ್ 9 ಅಥವಾ 10ರಿಂದ ತನ್ನ ಪ್ರಚಾರಕ್ಕೆ ಚಾಲನೆ ನೀಡುವ ಸಾಧ್ಯತೆಗಳಿವೆ.