ಅಯೋಧ್ಯೆ ತೀರ್ಪು ಹಿಂದೂ-ಮುಸ್ಲಿಮ್‌ರಲ್ಲಿ ಮಿಶ್ರ ಭಾವನೆ ಹುಟ್ಟುಹಾಕಿದ್ದರೆ, ಮತ್ತೊಂದೆಡೆ ಬಿಹಾರದ ಹಳ್ಳಿಯೊಂದರ ಮುಸ್ಲಿಮರು ಹಿಂದೂಗಳಿಗಾಗಿ ದೇವಾಲಯ ಕಟ್ಟಿಸಲು ಮುಂದಾಗುವ ಮೂಲಕ ನಿಜವಾದ ಕೋಮು-ಸೌಹಾರ್ದತೆ ಸಾರಿದ್ದಾರೆ.
ಬಿಹಾರದ ಬೆಗುಸರಾಯ್ ಜಿಲ್ಲೆಯ ಬಾಚಾವಾರಾ ಗ್ರಾಮದಲ್ಲಿ ಮುಸ್ಲಿಮರು ಹಿಂದೂಗಳ ದೇವಾಲಯ ಕಟ್ಟುವಲ್ಲಿ ತುಂಬಾ ಬ್ಯುಸಿಯಾಗಿದ್ದರಂತೆ. ಅಷ್ಟೇ ಅಲ್ಲ ಜಾಗವನ್ನು ಕೂಡ ಮುಸ್ಲಿಮರೊಬ್ಬರು ನೀಡಿದ್ದು, ಅಲ್ಲಿಯೇ ಶಿವ ದೇವಾಲಯ ನಿರ್ಮಾಣಗೊಳ್ಳುತ್ತಿದೆ.
ದೇವಾಲಯ ನಿರ್ಮಾಣಕ್ಕಾಗಿ ಮುಸ್ಲಿಮರೇ ಹಣ ಸಂಗ್ರಹಿಸಿದ್ದು, ಕೆಲವರು ಸ್ವಯಂ ಆಗಿ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಕೋಮು-ಸೌಹಾರ್ದತೆಯನ್ನು ಮೆರೆದಿದ್ದಾರೆ.
ಈ ಗ್ರಾಮದಲ್ಲಿ ಮುಸ್ಲಿಮರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಒಂದೆಡೆ ಇಡೀ ದೇಶವೇ ಅಯೋಧ್ಯೆ ತೀರ್ಪು ಬರುವ ಮುನ್ನ ಬಹಳಷ್ಟು ಕಾತರ, ಆತಂಕ, ಭಯದಲ್ಲಿ ಇದ್ದಿದ್ದರೆ, ಈ ಗ್ರಾಮದಲ್ಲಿ ಮುಸ್ಲಿಮರು ದೇವಾಲಯ ಕಟ್ಟುವ ಕಾರ್ಯ ನಿರಾತಂಕವಾಗಿ ಮುಂದುವರಿಸಿದ್ದರು.
ಅಯೋಧ್ಯೆ ವಿವಾದ ಕುರಿತಂತೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ನೀಡಿದ ತೀರ್ಪನ್ನು ನಾವೆಲ್ಲ ಸ್ವಾಗತಿಸಿದ್ದೇವೆ. ಅಲ್ಲದೆ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಸಂಭ್ರಮಾಚರಣೆ ಮಾಡಿರುವುದಾಗಿಯೂ ಗ್ರಾಮದ ಹಿರಿಯ ಸಲಾಲುದ್ದೀನ್ ಅನ್ಸಾರಿ ತಿಳಿಸಿದ್ದಾರೆ.