ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಂಬ್ ಬೆದರಿಕೆ; ವಿಮಾನ ತುರ್ತು ಭೂಸ್ಪರ್ಶಕ್ಕೆ ದೆಹಲಿ ನಕಾರ
(bomb scare | Singapore Airlines | Delhi airport | CWG 2010)
ಬಾಂಬ್ ಬೆದರಿಕೆ; ವಿಮಾನ ತುರ್ತು ಭೂಸ್ಪರ್ಶಕ್ಕೆ ದೆಹಲಿ ನಕಾರ
ಕೊಲ್ಕತ್ತಾ, ಸೋಮವಾರ, 4 ಅಕ್ಟೋಬರ್ 2010( 13:42 IST )
ವಿಮಾನವೊಂದರಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದಾಗ, ಕಾಮನ್‌ವೆಲ್ತ್ ಗೇಮ್ಸ್ ಭದ್ರತೆ ಹಿನ್ನೆಲೆಯಲ್ಲಿ ಲ್ಯಾಂಡಿಂಗ್‌ಗೆ ನಿರಾಕರಿಸಿದ್ದು, ಕೊಲ್ಕತ್ತಾ ವಿಮಾನದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವರದಿಗಳು ಹೇಳಿವೆ.
ಸಿಂಗಾಪುರ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗೆ ಸೇರಿದ ಹೌಸ್ಟನ್-ಮಾಸ್ಕೋ-ಸಿಂಗಾಪುರ ಮಾರ್ಗದ ವಿಮಾನವು ಆಕಾಶ ಮಾರ್ಗದಲ್ಲಿದ್ದಾಗ ಬಾಂಬ್ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವ ಬಗ್ಗೆ ಸಂಪರ್ಕಿಸಲಾಗಿತ್ತು. ಆದರೆ ಅಧಿಕಾರಿಗಳು ನಿರಾಕರಿಸಿದ ನಂತರ ಕೊಲ್ಕತ್ತಾ ನಿಲ್ದಾಣದಲ್ಲಿ ಭಾನುವಾರ ರಾತ್ರಿ 11.39ಕ್ಕೆ ತುರ್ತು ಭೂಸ್ಪರ್ಶ ಮಾಡಲಾಯಿತು.
250 ಪ್ರಯಾಣಿಕರು ಹಾಗೂ 15 ಸಿಬ್ಬಂದಿಗಳಿದ್ದ ವಿಮಾನವು ಅಮೃತಸರದ ಆಸುಪಾಸಿನಲ್ಲಿದ್ದ ಸಂದರ್ಭದಲ್ಲಿ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ಕ್ಯಾಪ್ಟನ್‌ಗೆ ನೀಡಲಾಗಿತ್ತು. ಪೈಲಟ್ ತಕ್ಷಣವೇ ದೆಹಲಿ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿದ್ದ.
ಕಾಮನ್‌ವೆಲ್ತ್ ಗೇಮ್ಸ್ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಿಗದಿಯನ್ನು ಹೊರತುಪಡಿಸಿದ ಯಾವುದೇ ವಿಮಾನಗಳನ್ನು ಇಳಿಸಲು ಅವಕಾಶ ನೀಡಬಾರದು ಎಂಬ ಆದೇಶ ಜಾರಿಯಲ್ಲಿರುವುದರಿಂದ ಸಿಂಗಾಪುರ ಏರ್‌ಲೈನ್ಸ್ ವಿಮಾನವನ್ನು ಕೊಲ್ಕತ್ತಾಕ್ಕೆ ತೆರಳುವಂತೆ ದೆಹಲಿ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳು ಸೂಚಿಸಿದರು.
ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ದೇಶಕ್ಕೆ ಬಂದಿರುವ ವಿದೇಶಿ ಸ್ಪರ್ಧಿಗಳು ಮತ್ತು ನಿಯೋಗಕ್ಕೆ ಇಂತಹ ಪ್ರಸಂಗಗಳಿಂದಾಗಿ ಯಾವುದೇ ಭೀತಿ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ ಎಂದು ಮೂಲಗಳು ಹೇಳಿವೆ.
ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನೀಡದೇ ಇದ್ದುದರಿಂದ ನಂತರ ಕೊಲ್ಕತ್ತಾ ವಿಮಾನ ನಿಲ್ದಾಣವನ್ನು ಪೈಲಟ್ ಸಂಪರ್ಕಿಸಿದ್ದ. ಅಲ್ಲಿ ಅನುಮತಿ ದೊರೆತ ನಂತರ ವಿಮಾನವನ್ನು ಇಳಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ಕಾರ್ಯಕ್ಕೆ ಮುಂದಾಗಲಾಯಿತು.
ವಿಮಾನ ಇಳಿಯುತ್ತಿದ್ದಂತೆ ಅದನ್ನು ಪಾರ್ಕಿಂಗ್ ಜಾಗಕ್ಕೆ ಕೊಂಡೊಯ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳು ತಕ್ಷಣವೇ ವಿಮಾನ ಒಳಗಡೆ ಸಂಪೂರ್ಣ ತಪಾಸಣೆ ನಡೆಸಿದವು. ಆದರೆ ಬಾಂಬ್ ಅಥವಾ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ.