ಯುವ ಜನತೆ ರಾಜಕೀಯಕ್ಕೆ ಬರಬೇಕು ಎಂದು ಕಾಯುತ್ತಿರುವ ಪ್ರಧಾನ ಮಂತ್ರಿ ಎಂದೇ ಖ್ಯಾತರಾಗಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಮಧ್ಯಪ್ರದೇಶದ ಶೆವೊಪುರ್ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಜ್ಯವನ್ನು ಯುವ ನಾಯಕತ್ವವು ಮುನ್ನಡೆಸುವುದನ್ನು ನೋಡುವ ನನ್ನ ಭರವಸೆ ಒಂದಲ್ಲ ಒಂದು ದಿನ ಈಡೇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ಯುವ ಜನತೆಯನ್ನು ರಾಜಕೀಯದಲ್ಲಿ ಪ್ರೋತ್ಸಾಹಿಸುತ್ತಾ ಬಂದಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕೇಂದ್ರದ ಮನಮೋಹನ್ ಸಿಂಗ್ ಸರಕಾರವು ಹಲವು ಯುವ ಸಂಸದರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಹುಲ್ ವಿವರಿಸಿದರು.
ಪಕ್ಷದ ಯುವ ವಾಹಿನಿಯು ಮಧ್ಯಪ್ರದೇಶದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಮುಂದಾಗಿರುವುದಕ್ಕೆ ತಮಿಳುನಾಡನ್ನು ಉದಾಹರಿಸಿರುವ ರಾಹುಲ್, ಬಹುತೇಕ ಸದಸ್ಯತ್ವವನ್ನೇ ಹೊಂದಿರದ ರಾಜ್ಯದಲ್ಲಿ ಪ್ರಸಕ್ತ 16,000 ಸದಸ್ಯರನ್ನು ಕಾಂಗ್ರೆಸ್ ಯುವ ವಾಹಿನಿ ಹೊಂದಿದೆ ಎಂದರು.
ಮಧ್ಯಪ್ರದೇಶದಲ್ಲಿನ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರಾಜ್ಯದಲ್ಲಿ ಯುವ ನಾಯಕತ್ವವು ಮುಂಚೂಣಿಗೆ ಬರುವುದನ್ನು ತಾನು ಎದುರು ನೋಡುತ್ತಿದ್ದೇನೆ ಎಂದರು.
ಕೇಂದ್ರ ಸರಕಾರದ ಪ್ರಗತಿಪರ ಯೋಜನೆಗಳನ್ನು ಬೆಂಬಲಿಸುವ ಬದಲು ಬಿಜೆಪಿಯು ಸುಖಾಸುಮ್ಮನೆ ಅಡ್ಡಿಪಡಿಸುತ್ತಾ, ಅನಗತ್ಯ ಹೇಳಿಕೆಗಳನ್ನು ನೀಡುತ್ತಿದೆ ಎಂದೂ ಟೀಕಿಸಿದರು.
ಯುವ ಕಾಂಗ್ರೆಸ್‌ನ ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಇಂದು ಮಧ್ಯಪ್ರದೇಶಕ್ಕೆ ಆಗಮಿಸಿರುವ ರಾಹುಲ್ ಗಾಂಧಿ, ಇನ್ನೆರಡು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯದವರ ಜತೆ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.