ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಕತ್ತಿದ್ರೆ ನನ್ನನ್ನು ಬಂಧಿಸಿ: ಕಾಂಗ್ರೆಸ್‌ಗೆ ಮೋದಿ ಸವಾಲು (Narendra Modi | Sohrabuddin Sheikh | BJP | Congress)
Bookmark and Share Feedback Print
 
ಕಾಂಗ್ರೆಸ್ ವಿರುದ್ಧ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೆ ವಾಗ್ದಾಳಿ ಆರಂಭಿಸಿದ್ದಾರೆ. ಸ್ಥಳೀಯ ಚುನಾವಣೆಗಳ ಪ್ರಚಾರದಲ್ಲಿರುವ ಮೋದಿ, ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ತಾಕತ್ತಿದ್ದರೆ ಕಾಂಗ್ರೆಸ್ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

ತನ್ನನ್ನು ಜೈಲಿಗೆ ತಳ್ಳುವ ಸಲುವಾಗಿ ಕಾಂಗ್ರೆಸ್ ನಾಯಕರು ನಿದ್ದೆಗೆಟ್ಟು ಸಂಚುಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ಬಂಧಿಸಿ ನೋಡಲಿ ಎಂದರು.

ಸಿಬಿಐ ತನಿಖಾ ಸಂಸ್ಥೆಯನ್ನು ಬಳಸಿಕೊಂಡು ಕಾಂಗ್ರೆಸ್ ನನಗೆ ಕಿರುಕುಳ ಕೊಡುತ್ತಿದೆ. ಗುಜರಾತ್ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರದಲ್ಲಿನ ಯುಪಿಎ ಸರಕಾರವು ಅವಿರತ ಶ್ರಮವಹಿಸುತ್ತಿದೆ ಎಂದೂ ಆರೋಪಿಸಿದರು.

ಆದರೆ ಇಂತಹ ಯಾವುದೇ ಯತ್ನಗಳನ್ನು ಫಲ ಕೊಡಲು ಗುಜರಾತ್ ಜನತೆ ಬಿಡುವುದಿಲ್ಲ ಎಂಬ ಭರವಸೆ ತನಗಿದೆ. ಈ ಹಿಂದಿನಂತೆ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಇದನ್ನು ಸಾಧಿಸಿ ತೋರಿಸಿ ಎಂದು ಮುಖ್ಯಮಂತ್ರಿ ಕರೆ ನೀಡಿದರು.

ತನ್ನ ಎಂದಿನ ಆಕರ್ಷಕ ಶೈಲಿಯ ಭಾಷಣದಲ್ಲಿ ಜನರನ್ನು ಮೋಡಿ ಮಾಡಿದ ಮೋದಿ, 'ತಾವು ಯಾಕೆ ಸೊಹ್ರಾಹುದ್ದೀನ್‌ನನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ' ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸುವಂತೆ ಒತ್ತಾಯಿಸಿದರು.

ಜೈಲಿಗೆ ಹೋಗಲು ನಾನು ಹೆದರುತ್ತಿಲ್ಲ. ಅದಕ್ಕೆ ನಾನು ಸಿದ್ಧನಾಗಿದ್ದೇನೆ. ಆದರೆ ಹಾಗೆ ನಡೆಯಲು ರಾಜ್ಯದ ಜನತೆ ಬಿಡಲಾರರು. ಮುಂದೆ ಕಾಂಗ್ರೆಸ್ ನಾಯಕನೊಬ್ಬ ನಿಮ್ಮಲ್ಲಿ ಮತ ಯಾಚಿಸಿದಾಗ, 'ನಿಮಗೆ ಸೊಹ್ರಾಬುದ್ದೀನ್ ಯಾವ ರೀತಿಯಲ್ಲಿ ಸಂಬಂಧಿ? ನಿಮ್ಮ ಸರಕಾರವು ಅವನನ್ನು ಯಾಕೆ ಬೆಂಬಲಿಸುತ್ತಿದೆ?' ಎಂದು ಪ್ರಶ್ನಿಸಿ ಎಂದರು.

ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಸಿಬಿಐ ಕಾಂಗ್ರೆಸ್ ಕುಮ್ಮಕ್ಕಿನಿಂದ ಬಂಧಿಸಿದೆ ಎಂದು ಮೋದಿ ಆರೋಪಿಸುತ್ತಾ ಬಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ