ಹುಲಿಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುತ್ತಿರುವುದಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪ್ರಾಣಿಗಳ ಅಂಗಾಂಗಳ ಮಾರಾಟ ಪ್ರಕರಣದಲ್ಲಿ ದೋಷಿಯಾಗಿರುವ ಕುಖ್ಯಾತ ಬೇಟೆಗಾರ ಸನ್ಸಾರ್ ಚಾಂದ್‌ನತ್ತ ಕೋಪ ಪ್ರದರ್ಶಿಸಿದೆ. ಹೀಗೆ ಮುಂದುವರಿದಲ್ಲಿ ಮುಂದೊಂದು ದಿನ ವಾಣಿಜ್ಯ ಬಳಕೆಗಳಿಗಾಗಿ ಮಾನವನ ತೊಗಲು ಕೂಡ ಮಾರಲ್ಪಡುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ.
ನೀವು ಮಾರಾಟ ಮಾಡುತ್ತಿರುವುದು ಹುಲಿಗಳು ಮತ್ತು ಚಿರತೆಗಳ ಚರ್ಮ. ನಾಳೆಯ ದಿನ ನೀವು ಮಾನವ ಚರ್ಮವನ್ನೂ ಮಾರಾಟ ಮಾಡಬಹುದು. ಇದೇ ಕಾರಣದಿಂದ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹುಲಿಗಳು ಮತ್ತು ಚಿರತೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಮಾರ್ಖಂಡೇಯ ಕಟ್ಜು ಮತ್ತು ಟಿ.ಎಸ್. ಠಾಕೂರ್ ಅವರು ಚಾಂದ್ ಮನವಿಗೆ ಪ್ರತಿಕ್ರಿಯಿಸಿದರು.
ಚಾಂದ್ ಬೇಟೆಯಲ್ಲಿ ತೊಡಗಿಸಿಕೊಂಡಿಲ್ಲ ಎಂಬ ಆತನ ವಕೀಲರ ವಾದವನ್ನು ಇದೇ ಸಂದರ್ಭದಲ್ಲಿ ಅಪೆಕ್ಸ್ ಕೋರ್ಟ್ ತಳ್ಳಿ ಹಾಕಿದೆ.
ನಿಮಗೆಲ್ಲ ಹಣದ ಮೇಲೆಯೇ ಮೋಹ. ನಿಮಗೆ ಬೇಕಾಗಿರುವುದು ಹಣ ಮಾತ್ರ. ಈ ದೇಶದಲ್ಲಿ ಎಲ್ಲವನ್ನೂ ವಾಪಾರಿ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಇವತ್ತು ಜನ ಪ್ರಾಣಿಗಳ ಚರ್ಮ ಮಾರಾಟ ಮಾಡುತ್ತಾರೆ, ನಾಳೆ ಮನುಷ್ಯರ ಚರ್ಮವನ್ನೂ ಮಾರಲು ಆರಂಭಿಸುತ್ತಾರೆ ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
2003ರಲ್ಲಿ ಚಿರತೆಗಳ ಚರ್ಮ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಚಾಂದ್ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಈ ಸಂಬಂಧ ಆತ ಸಲ್ಲಿಸಿದ್ದ ಪೆರೋಲ್ ಅರ್ಜಿಗೆ ಪ್ರತಿಕ್ರಿಯಿಸುವಂತೆ ಜುಲೈ 5ರಂದು ಕೋರ್ಟ್ ರಾಜಸ್ತಾನ ಸರಕಾರಕ್ಕೆ ಸೂಚಿಸಿತ್ತು.
ಪ್ರಾಣಿಗಳ ಹಲ್ಲು, ಚರ್ಮ ಮತ್ತು ಇತರ ಭಾಗಗಳನ್ನು ಕಳ್ಳಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.