ಭಾರೀ ಭದ್ರತೆಯ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿರುವ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್‌ನನ್ನು ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಗೊಳಿಸುವ ಸಾಧ್ಯತೆಗಳಿವೆ. ಈ ಕುರಿತು ಮುಂಬೈ ಪೊಲೀಸರು ಮಹಾರಾಷ್ಟ್ರ ಸರಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿಕೊಟ್ಟಿದೆ.
ಕಸಬ್‌ನನ್ನು ರಾಜ್ಯದ ಅತಿದೊಡ್ಡ ಕಾರಾಗೃಹ ಯರವಾಡ ಜೈಲಿಗೆ ಸ್ಥಳಾಂತರಗೊಳಿಸುವ ಕುರಿತು ಪರಿಗಣನೆ ನಡೆಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿಕೊಡಲಾಗಿದೆ ಎಂದು ಅಪರಾಧ ದಳದ ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.
2008ರ ನವೆಂಬರ್ 26ರ ದಾಳಿಗಾಗಿ ಮುಂಬೈ ವಿಶೇಷ ನ್ಯಾಯಾಲಯದಿಂದ ಮರಣ ದಂಡನೆ ತೀರ್ಪು ಪಡೆದುಕೊಂಡಿರುವ ಕಸಬ್ ಪ್ರಕರಣವು ಪ್ರಸಕ್ತ ಬಾಂಬೆ ಹೈಕೋರ್ಟಿನಲ್ಲಿದೆ. ಆತನನ್ನು ಭಾರೀ ಭದ್ರತೆಯ ಆರ್ಥರ್ ರೋಡ್ ಜೈಲಿನಲ್ಲಿನ ಅಂಡಾಕಾರದ ಕೋಣೆಯಲ್ಲಿ ಇಡಲಾಗಿದೆ.
ಮೂಲಗಳ ಪ್ರಕಾರ ಕಸಬ್ ಮರಣ ದಂಡನೆ ಖಚಿತಗೊಳಿಸುವ ಪ್ರಕರಣದ ವಿಚಾರಣೆಯು ಬಾಂಬೆ ಹೈಕೋರ್ಟಿನಲ್ಲಿ ಮುಕ್ತಾಯವಾದ ನಂತರ ಯರವಾಡ ಜೈಲಿಗೆ ಸ್ಥಳಾಂತರಗೊಳಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಿದೆ.
ಬಾಂಬ್ ನಿರೋಧಕ, ಗುಂಡು ನಿರೋಧಕ ಆರ್ಥರ್ ರೋಡ್ ಜೈಲಿನ ಪಕ್ಕದಲ್ಲೇ ಮೋನೋರೈಲು ಯೋಜನೆಯು ಸಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಈ ರೈಲು ಜೈಲು ಆವರಣದ ಮೇಲಿನಿಂದಲೇ ಹಾದು ಹೋಗುವುದರಿಂದ, ಕಾಮಗಾರಿ ನಡೆಸುವ ಸಂದರ್ಭದಲ್ಲಿ ಜೈಲು ಸ್ಪಷ್ಟವಾಗಿ ಕಾಣುತ್ತದೆ. ಇದು ಕಸಬ್ ಜೀವಕ್ಕೆ ಅಪಾಯಕಾರಿ ಎಂದು ಪೊಲೀಸ್ ಅಧಿಕಾರಿಗಳು ಪರಿಗಣಿಸಿ, ಯರವಾಡ ಜೈಲಿಗೆ ಸ್ಥಳಾಂತರಗೊಳಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ.