ಸಲ್ಮಾನ್ 'ಬಿಗ್ ಬಾಸ್'ಗೆ ಪಾಕಿಸ್ತಾನಿಗಳು: ಠಾಕ್ರೆ ಬೆದರಿಕೆ
ಮುಂಬೈ, ಮಂಗಳವಾರ, 5 ಅಕ್ಟೋಬರ್ 2010( 16:04 IST )
'ಕಲರ್ಸ್' ವಾಹಿನಿಯ ಸಲ್ಮಾನ್ ಖಾನ್ ನಿರೂಪಕರಾಗಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ಪಾಕಿಸ್ತಾನಿ ಕಲಾವಿದರು ಪಾಲ್ಗೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ವರಿಷ್ಠ ಬಾಳಾ ಠಾಕ್ರೆ, ಇದನ್ನು ಮುಂದುವರಿಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಏನು ಬೇಕಾದರೂ ಆಗಲಿ, ಆದರೆ ನಾವು ರಿಯಾಲಿಟಿ ಶೋವನ್ನು ಮುಂದುವರಿಯಲು ಬಿಡುವುದಿಲ್ಲ. ನಮಗೆ ಕಾನೂನಿನ ಬೆದರಿಕೆಗಳನ್ನು ಹಾಕಬೇಡಿ. ಆ ಟಿವಿ ರಿಯಾಲಿಟಿ ಶೋವನ್ನು ನಾವು ನಿಲ್ಲಿಸುತ್ತೇವೆ ಎಂದು ಠಾಕ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
14 ಸ್ಪರ್ಧಿಗಳನ್ನೊಳಗೊಂಡಿರುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಾಲ್ಕನೇ ಆವೃತ್ತಿ ಅಕ್ಟೋಬರ್ 3ರಂದು ಆರಂಭಗೊಂಡಿದೆ. ಇದರಲ್ಲಿ ಪಾಕಿಸ್ತಾನಿ ರೂಪದರ್ಶಿ ಮತ್ತು ಕುಖ್ಯಾತ ಕ್ರಿಕೆಟಿಗ ಮೊಹಮ್ಮದ್ ಆಸಿಫ್ ಮಾಜಿ ಗೆಳತಿ ವೀಣಾ ಮಲಿಕ್ ಹಾಗೂ ಪಾಕಿಸ್ತಾನದ ಚಾಟ್ ಶೋದಲ್ಲಿ ಜನಪ್ರಿಯರಾದ ಬೇಗಂ ನವಾಜಿಶ್ ಆಲಿ (ಸೀರೆ ಉಟ್ಟ ಗಂಡಸು) ಕೂಡ ಪಾಲ್ಗೊಂಡಿದ್ದಾರೆ.
ಈ ಇಬ್ಬರು ಪಾಕಿಸ್ತಾನಿ ಕಲಾವಿದರನ್ನು ಬಿಗ್‌ಬಾಸ್-IVಕ್ಕೆ ಸೇರಿಸಿಕೊಂಡಿರುವುದು ಶಿವಸೇನೆ ಮತ್ತು ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎರಡೂ ಪಕ್ಷಗಳು ರಿಯಾಲಿಟಿ ಶೋ ಮುಂದುವರಿಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿವೆ.
ಈ ರಿಯಾಲಿಟಿ ಶೋದಲ್ಲಿ ಪಾಕ್ ಉಗ್ರ ಅಜ್ಮಲ್ ಅಮೀರ್ ಕಸಬ್ ಮಾಜಿ ವಕೀಲ ಅಬ್ಬಾಸ್ ಕಜ್ಮಿ, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್, ಅಮೀಷಾ ಪಟೇಲ್ ಸಹೋದರ-ನಟ ಅಶ್ಮಿತ್ ಪಟೇಲ್, ಕುಖ್ಯಾತ ದರೋಡೆಕೋರ ದೇವೇಂದರ್ ಆಲಿಯಾಸ್ ಬಂಟಿ, ಬಿಹಾರಿ ನಟ ಮನೋಜ್ ತಿವಾರಿ, ಮಾಜಿ ಡಕಾಯಿತೆ ಸೀಮಾ ಪರಿಹಾರ್ ಮುಂತಾದವರಿದ್ದಾರೆ.