ನಮ್ಮ ಪಕ್ಷ ಮತ್ತು ಅದರ ಯುವ ವಾಹಿನಿಯಲ್ಲಿ ಮುಖಸ್ತುತಿ ಅಥವಾ ಹೊಗಳುವಿಕೆಗೆ ಅವಕಾಶವಿಲ್ಲ. ಹಾಗೇನಾದರೂ ಯಾರಿಗಾದರೂ ಬೇಕೆನಿಸಿದರೆ ಅವರು ಬಿಜೆಪಿಗೆ ಹೋಗಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಯಾರು ಮುಖಸ್ತುತಿಯಲ್ಲಿ ನಂಬಿಕೆಯಿಟ್ಟಿದ್ದೀರೋ, ಅವರು ಕಾಂಗ್ರೆಸ್ ಅಥವಾ ಯುವ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬಹುದು ಎಂದು ಮಧ್ಯಪ್ರದೇಶ ಪ್ರವಾಸದಲ್ಲಿರುವ ರಾಹುಲ್ ಹೇಳಿದರು.
ಕಾಂಗ್ರೆಸ್‌ನಲ್ಲಿ ಮೇಲೆ ಬರಲು ಗೆಳೆಯರು ಅಥವಾ ಸಂಬಂಧಿಕರನ್ನು ಬಳಕೆ ಮಾಡುತ್ತಿದ್ದ ದಿನಗಳು ಕೂಡ ಮುಗಿದು ಹೋಗಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಅತಿಯಾಗಿ ಹೊಗಳುವ ಪ್ರಸಂಗಗಳಿಗೆ ಅಂತ್ಯ ಹಾಡಿದ್ದೇನೆ. ಇದು ಮುಂದಿನ ದಿನಗಳಲ್ಲಿ ಮಧ್ಯಪ್ರದೇಶದಲ್ಲೂ ಜಾರಿಗೆ ಬರಲಿದೆ ಎಂದು ಹೊಗಳುಭಟರಿಗೆ ಎಚ್ಚರಿಕೆ ನೀಡಿದರು.
ರಾಜಕೀಯ ಮೈಲೇಜ್‌ಗಾಗಿ ದೇಶಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಮಧ್ಯಪ್ರದೇಶ ಪ್ರವಾಸ ಸಂದರ್ಭದಲ್ಲಿ ಬುಡಕಟ್ಟು ಜನ ಮತ್ತು ಹಿಂದುಳಿದವರನ್ನು ಕೂಡ ಭೇಟಿಯಾಗುತ್ತಿದ್ದಾರೆ.
ಅವರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ, ನಿಮ್ಮ ಪ್ರಗತಿ ಖಚಿತವೆನಿಸಬೇಕಾದರೆ ಅತ್ಯುತ್ತಮ ನಾಯಕತ್ವವನ್ನು ಮುನ್ನಡೆಸುವ ಕೆಲಸ ನಿಮ್ಮಿಂದ ಆಗಬೇಕಿದೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸರಕಾರವನ್ನು ಅಸ್ತಿತ್ವಕ್ಕೆ ತಂದಲ್ಲಿ ತಮ್ಮೆಲ್ಲ ಸಮಸ್ಯೆಗಳು ಪರಿಹಾರವಾಗಲಿವೆ. ನೀವು ಒರಿಸ್ಸಾದಲ್ಲಿ ಬುಡಕಟ್ಟು ಜನರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟವನ್ನು ಮಾದರಿಯನ್ನಾಗಿ ಸ್ವೀಕರಿಸಿ ಎಂದು ಸಲಹೆ ನೀಡಿದರು.
ಇತ್ತೀಚೆಗಷ್ಟೇ ನಿಧನರಾದ ಮಧ್ಯಪ್ರದೇಶ ವಿಧಾನಸಭೆಯ ಪ್ರತಿಪಕ್ಷದ ನಾಯಕಿ ಜಮುನಾ ದೇವಿಯವರಿಗೂ ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಶ್ರದ್ಧಾಂಜಲಿ ಅರ್ಪಿಸಿದರು.