ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಧ್ವಂಸ ಅಪಮಾನಕಾರಿ, ಕ್ರಿಮಿನಲ್ ಕೃತ್ಯ: ಕಾಂಗ್ರೆಸ್ (Ayodhya verdict | Babri demolition | Congress | Ramjanmabhoomi)
Bookmark and Share Feedback Print
 
ಅಯೋಧ್ಯೆ ಒಡೆತನದ ಕುರಿತ ನ್ಯಾಯಾಂಗ ಪ್ರಕ್ರಿಯೆಯನ್ನು ತಾನು ಗೌರವಿಸುವುದಾಗಿ ಹೇಳಿರುವ ಕಾಂಗ್ರೆಸ್, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಅಪಮಾನಕಾರಿ ಮತ್ತು ಕ್ರಿಮಿನಲ್ ಕೃತ್ಯವನ್ನು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಕ್ಷಮಿಸದು ಎಂದಿದೆ.

ಅಯೋಧ್ಯೆ ಒಡೆತನದ ಕುರಿತ ನ್ಯಾಯಾಂಗ ಪ್ರಕ್ರಿಯೆಯನ್ನು ಕಾಂಗ್ರೆಸ್ ಗೌರವಿಸುತ್ತದೆ. ಅದೇ ಹೊತ್ತಿಗೆ ಮೇಲ್ಮನವಿ ಸಲ್ಲಿಸುತ್ತಿರುವುದರಿಂದ ನಾವು ಸುಪ್ರೀಂ ಕೋರ್ಟ್ ಅಂತಿಮ ತೀರ್ಮಾನಕ್ಕೆ ಕಾಯಬೇಕಾಗಿದೆ ಎಂದು ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ ಹೇಳಿದ್ದಾರೆ.

ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ತೀರ್ಪು ಮತ್ತು ಕಾಶ್ಮೀರದಲ್ಲಿನ ಬೆಳವಣಿಗೆಗಳ ಕುರಿತ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲು ಕರೆದಿದ್ದ ಕಾಂಗ್ರೆಸ್ ಸಂಚಾಲನಾ ಸಮಿತಿಯ ಸಭೆಯ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ವಿತ್ತ ಸಚಿವ ಪ್ರಣಬ್ ಮುಖರ್ಜಿ ಮತ್ತು ಗೃಹಸಚಿವ ಪಿ. ಚಿದಂಬರಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಒಂದು ಕಾಲದಲ್ಲಿ ಬಾಬ್ರಿ ಮಸೀದಿಯಿದ್ದ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಮಾನವು ಯಾವುದೇ ಕಾರಣಕ್ಕೂ 1992ರ ಮಸೀದಿ ಧ್ವಂಸದ ಅಪಮಾನಕಾರಿ ಮತ್ತು ಕ್ರಿಮಿನಲ್ ಕೃತ್ಯವನ್ನು ಮನ್ನಿಸುವುದಿಲ್ಲ ಎನ್ನುವುದು ಪ್ರಮುಖ ವಿಚಾರ ಎಂದು ಇದೇ ಸಂದರ್ಭದಲ್ಲಿ ದ್ವಿವೇದಿ ತಿಳಿಸಿದರು.

ಮಸೀದಿ ಧ್ವಂಸದ ಪಿತೂರಿದಾರರನ್ನು ಕಾನೂನಿನ ಕಟಕಟೆಗೆ ತರಬೇಕು ಎಂದು ಒತ್ತಾಯಿಸಿದ ಅವರು, ಅಯೋಧ್ಯೆ ಪ್ರಕರಣದಲ್ಲಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸುವ ಉಭಯ ಪಕ್ಷಗಳ ಯತ್ನವನ್ನು ಪಕ್ಷವು ಸ್ವಾಗತಿಸುತ್ತದೆ ಎಂದರು.

ಅಯೋಧ್ಯೆಯ ವಿವಾದಿತ ಸ್ಥಳವೇ ರಾಮ ಜನ್ಮಭೂಮಿ ಎಂದು ಘೋಷಿಸಿದ್ದ ಅಲಹಾಬಾದ್ ಹೈಕೋರ್ಟ್ ಲಕ್ನೋ ವಿಶೇಷ ತ್ರಿಸದಸ್ಯ ಪೀಠವು, ವಿವಾದಿತ ಸ್ಥಳವನ್ನು ಮೂರು ಭಾಗಗಳನ್ನಾಗಿ ಮಾಡಿ ಅದನ್ನು ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಕೇಂದ್ರೀಯ ಮಂಡಳಿಗೆ ಹಂಚಿ ತೀರ್ಪು ಪ್ರಕಟಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ