ಅತಿಯಾದ ದುಃಖ, ಅತಿಯಾದ ಖುಷಿ, ಶಾಕಿಂಗ್ ಸುದ್ದಿಗಳು ಆಘಾತ ತಂದೊಡ್ಡುತ್ತದೆ ಎಂಬುದಕ್ಕೆ ಪುರಾವೆ ಎಂಬಂತೆ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ದೋಷಿ ಎಂದು ತೀರ್ಪು ನೀಡಿದ್ದನ್ನು ಕೇಳಿ ಬಿಹಾರದ ಮಾಜಿ ಸಚಿವರೊಬ್ಬರು ದಿಢೀರನೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
2001ರಲ್ಲಿ ಶೇಕ್‌ಪುರ ಜಿಲ್ಲೆಯಲ್ಲಿ ಒಂಬತ್ತು ಮಂದಿ ಆರ್‌ಜೆಡಿ ಕಾರ್ಯಕರ್ತರ ನರಮೇಧ ಪ್ರಕರಣ ಕುರಿತಂತೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಸಂಜಯ್ ಕುಮಾರ್ ಸಿಂಗ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಸ್ಥಳೀಯ ಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ ಅಕ್ಟೋಬರ್ 7ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತ್ತು.
ತೀರ್ಪು ಪ್ರಕಟವಾದ ನಂತರ ಆಘಾತಗೊಂಡ ಸಂಜಯ್ ಕುಮಾರ್ ಸಿಂಗ್‌ಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ಸಿಂಗ್ ಮೃತರಾದ ಸುದ್ದಿ ತಿಳಿದ ಅವರ ಬೆಂಬಲಿಗರು ಹಾಗೂ ಕೆಲ ವಕೀಲರು ದಾಂಧಲೆ ನಡೆಸಿದ್ದಾರೆ. ಆರೋಗ್ಯ ಸರಿ ಇಲ್ಲ ಎಂದು ಮನವಿ ಮಾಡಿದರೂ ಆಸ್ಪತ್ರೆಗೆ ಕರೆದೊಯ್ಯಲು ಕೋರ್ಟ್ ನಿರಾಕರಿಸಿದ್ದುದೇ ಅವರು ಸಾಯಲು ಕಾರಣ ಎಂದು ಗಂಭೀರವಾಗಿ ದೂರಿದ್ದಾರೆ.
ಸಂಜಯ್ ಸಿಂಗ್ ಅವರು ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಮೈತ್ರಿಕೂಟದ ರಾಬ್ರಿ ದೇವಿ ನೇತೃತ್ವದ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಿಂಗ್ ಪುತ್ರ, ಮಾಜಿ ಸಂಸದ ರಾಜ್‌ವೋ ಸಿಂಗ್ ಪ್ರಭಾವಶಾಲಿ ಕಾಂಗ್ರೆಸ್ ಮುಖಂಡರಾಗಿದ್ದರು. ಅವರನ್ನು ಕೆಲವು ವರ್ಷಗಳ ಹಿಂದಷ್ಟೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.