ಬಾಬ್ರಿ ಮಸೀದಿ ಧ್ವಂಸ ಕುರಿತು ಕ್ರಿಮಿನಲ್ ವಿಚಾರಣೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಆ ಪ್ರಕರಣದ ಜತೆ ಅಯೋಧ್ಯೆ ಒಡೆತನ ವಿವಾದವನ್ನು ಸಂಬಂಧ ಕಲ್ಪಿಸಿರುವ ಕಾಂಗ್ರೆಸ್ಸನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಈಗ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ಒಡೆತನ ತೀರ್ಪು ನೀಡಿರುವುದು ನಿರ್ದಿಷ್ಟ ವಿಚಾರಗಳ ಬಗ್ಗೆ ದಾಖಲಾಗಿದ್ದ ಕೆಲವು ಸಿವಿಲ್ ದಾವೆಗಳ ಕುರಿತು. ಈ ಬಗ್ಗೆಯೇ ಮಾತನಾಡುವುದಾದರೆ, ತೀರ್ಪನ್ನು ಗೌರವಿಸುವುದು ನಮ್ಮ ಕರ್ತವ್ಯ. ಇಂತಹ ಹೊತ್ತಿನಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಮತ್ತೆ ಸಂಬಂಧ ಕಲ್ಪಿಸುವುದು ನನ್ನ ಪ್ರಕಾರ ಅಗತ್ಯವಿರಲಿಲ್ಲ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
ಕ್ರಿಮಿನಲ್ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿರುವ ಅವರು, ಸಿವಿಲ್ ಪ್ರಕರಣಗಳ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿಗೆ ಬಾಬ್ರಿ ಧ್ವಂಸ ಪ್ರಕರಣದ ಸಂಬಂಧ ಕಲ್ಪಿಸುವುದು ಬೇಕಾಗಿರಲಿಲ್ಲ ಎಂದರು.
ರಾಮ ಜನ್ಮಭೂಮಿ ಮಸೂದೆ ಬರಲಿ... ಹೀಗೆಂದು ಹೇಳಿರುವುದು ಬಿಜೆಪಿ ಉಪಾಧ್ಯಕ್ಷ ವಿನಯ್ ಕಟಿಯಾರ್. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ಖಚಿತಪಡಿಸಲು ಈ ಸಂಬಂಧ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸುವಂತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಈಗ ಹೇಗೂ ಅಲಹಾಬಾದ್ ಹೈಕೋರ್ಟ್ ಸ್ಪಷ್ಟ ತೀರ್ಪನ್ನೇ ನೀಡಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಾದಿ ಸುಗಮವಾಗಲು ಸಂಸತ್ತಿನಲ್ಲಿ ರಾಮ ಜನ್ಮಭೂಮಿ ಮಸೂದೆಯನ್ನು ತರಬೇಕು. ಇದನ್ನು ಸ್ವತಃ ಪ್ರಧಾನಿಯವರೇ ಮುಂದೆ ನಿಂತು ನೆರವೇರಿಸಬೇಕು ಎಂದು ಕಟಿಯಾರ್ ಹೇಳಿದರು.