ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವುದು ತನ್ನ ಬಯಕೆ ಎಂದಿರುವ ಬಿಜೆಪಿ, ಈ ವಿವಾದವನ್ನು ಚುನಾವಣೆಗಳಿಗೆ ಸಂಬಂಧ ಕಲ್ಪಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ರಾಮಮಂದಿರ ನಿರ್ಮಾಣವಾಗುವುದಾದರೆ, ತಾನು 20 ವರ್ಷ ಚುನಾವಣೆಗಳಲ್ಲಿ ಸೋಲಲೂ ಸಿದ್ಧ ಎಂದು ಹೇಳಿಕೊಂಡಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ, ಬಿಜೆಪಿಗೆ ಪ್ರಚಾರ ಮಾಡಲು ವಿಷಯವೇ ಇರುವುದಿಲ್ಲ ಎಂಬ ಟೀಕೆಗಳನ್ನು ನಾನು ಕೇಳುತ್ತಿದ್ದೇನೆ. ಅವರಿಗೆ ಹೇಳುವುದೇನೆಂದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ನಾವು ಮುಂದಿನ 20 ವರ್ಷಗಳ ಕಾಲ ಚುನಾವಣೆಗಳಲ್ಲಿ ಸೋಲಲು ಸಿದ್ಧರಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಕ್ಟೋಬರ್ 10ರಂದು ನಡೆಯಲಿರುವ ಅಹಮದಾಬಾದ್ ಮಹಾನಗರ ಪಾಲಿಕೆ ಚುನಾವಣೆಗಾಗಿನ ಸಾರ್ವಜನಿಕ ರ‌್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು.
ಅಲಹಾಬಾದ್ ಹೈಕೋರ್ಟಿನ ಲಕ್ನೋ ತ್ರಿಸದಸ್ಯ ಪೀಠವು ರಾಮಮಂದಿರ ಪರವಾಗಿ ತೀರ್ಪನ್ನು ಕೊಟ್ಟ ನಂತರ ಬಿಜೆಪಿ ನೆಲೆಯನ್ನೇ ಕಳೆದುಕೊಳ್ಳಲಿದೆ ಎಂದು ಕೆಲವರು ಟೀಕಿಸಿದ್ದರು. ರಾಮಮಂದಿರ ವಿವಾದವು ಪರಿಹಾರ ಕಂಡಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಮುಂದಿಡಲು ಅಸ್ತ್ರಗಳೇ ಇರುವುದಿಲ್ಲ ಎಂದು ಲೇವಡಿ ಮಾಡಲಾಗಿತ್ತು. ಇವುಗಳಿಗೆ ಇದೀಗ ಬಿಜೆಪಿ ಸ್ಪಷ್ಟ ಉತ್ತರವನ್ನು ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ.
ಅಯೋಧ್ಯೆ ತೀರ್ಪು ತೃಪ್ತಿ ತಂದಿಲ್ಲ: ವಿಎಚ್‌ಪಿ ಆರಂಭದಲ್ಲಿ ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ್ದ ವಿಶ್ವ ಹಿಂದೂ ಪರಿಷತ್ ಇದೀಗ ತನ್ನ ಪ್ಲೇಟ್ ಬದಲಿಸಿದೆ. ವಿವಾದಿತ ಸ್ಥಳವನ್ನು ವಿಭಾಗ ಮಾಡಬೇಕೆಂದು ಯಾವುದೇ ವಾದಿಗಳು ಕೇಳಿಕೊಂಡಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಹೊರತಾಗಿ ಇತರ ಯಾವುದೇ ಆಯ್ಕೆಗೂ ವಿಎಚ್‌ಪಿ ಸಿದ್ಧವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವ ಅದರ ನಾಯಕ ಅಶೋಕ್ ಸಿಂಘಾಲ್, ನಿರ್ಮೋಹಿ ಅಖಾಡ ಮತ್ತು ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗಳಿಗೆ ಭೂಮಿ ಹಂಚಿಕೆ ಮಾಡಿರುವುದು ತಪ್ಪು; ವಿವಾದಿತ ಪ್ರದೇಶದ ಒಟ್ಟು 67 ಎಕರೆ ಒಂದೇ ಭೂಮಿ ಎಂದು ಹೇಳಿದ್ದಾರೆ.
ಸಂಬಂಧಪಟ್ಟ ವಾದಿಗಳಿಗೆ ನ್ಯಾಯಾಲಯವು ತಲಾ 3,500 ಚದರ ಅಡಿ ಭೂಮಿಯನ್ನು ಹಂಚಿಕೆ ಮಾಡಿದೆ. ನಮಗೆ ಒದಗಿಸಿರುವ ಭೂಮಿಯಲ್ಲಿ ಪ್ರಸ್ತಾವಿತ ಭವ್ಯ ರಾಮಮಂದಿರದ ಗರ್ಭಗುಡಿ ನಿರ್ಮಿಸಲು ಕೂಡ ಸಾಧ್ಯವಿಲ್ಲ. ಅಷ್ಟು ಚಿಕ್ಕದಾಗಿದೆ. ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ, ನಮಗೆ ನ್ಯಾಯ ಒದಗಿಸುವ ಭರವಸೆ ನಮಗಿದೆ ಎಂದು ಸಿಂಘಾಲ್ ಹೇಳಿದ್ದಾರೆ.