ರಾಬ್ರಿ ವಿರುದ್ಧ ಸ್ಫರ್ಧಿಸಿ: ನಿತೀಶ್, ಮೋದಿಗೆ ಲಾಲೂ ಸವಾಲು
ಪಾಟ್ನಾ, ಬುಧವಾರ, 6 ಅಕ್ಟೋಬರ್ 2010( 13:09 IST )
ತನ್ನ ಪತ್ನಿ ರಾಬ್ರಿ ದೇವಿಯನ್ನು ಬಿಹಾರ ವಿಧಾನಸಭೆಯ ಚುನಾವಣಾ ಕಣಕ್ಕಿಳಿಸುವ ನಿರ್ಧಾರವನ್ನು ಎನ್‌ಡಿಎ ಟೀಕಿಸಿರುವುದಕ್ಕೆ ತಿರುಗೇಟು ನೀಡಿರುವ ರಾಷ್ಟ್ರೀಯ ಜನತಾದಳ ವರಿಷ್ಠ ಲಾಲೂ ಪ್ರಸಾದ್ ಯಾದವ್, ತಾಕತ್ತಿದ್ದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರು ಮಾಜಿ ಮುಖ್ಯಮಂತ್ರಿಯ ವಿರುದ್ಧ ಸ್ಪರ್ಧಿಸಲಿ ಎಂದಿದ್ದಾರೆ.
ನಾವು ಅಷ್ಟು ಆತ್ಮವಿಶ್ವಾಸ ಹೊಂದಿಲ್ಲ ಎಂದು ಹೇಳಿ. ಹಾಗಲ್ಲದೆ ನಿಮ್ಮಲ್ಲಿ ನಿಜಕ್ಕೂ ಆತ್ಮವಿಶ್ವಾಸ ಇರುವುದೇ ಹೌದಾಗಿದ್ದರೆ, ಸಂಯುಕ್ತ ಜನತಾದಳ ವರಿಷ್ಠ ನಿತೀಶ್ ಮತ್ತು ಬಿಜೆಪಿ ವರಿಷ್ಠ ಎಸ್.ಕೆ. ಮೋದಿಯವರು ನನ್ನ ಪತ್ನಿ ಸ್ಪರ್ಧಿಸುತ್ತಿರುವ ರಾಘೋಪುರ್ ಮತ್ತು ಸೋನೇಪುರ್ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ತಮ್ಮ ಜನಪ್ರಿಯತೆಯನ್ನು ಪರೀಕ್ಷೆ ನಡೆಸಲಿ ಎಂದು ಸವಾಲು ಹಾಕಿದರು.
ಈ ಎರಡೂ ಕ್ಷೇತ್ರಗಳಿಂದ ರಾಬ್ರಿ ಸ್ಪರ್ಧಿಸಲಿದ್ದಾರೆ. ಇದರ ನಾಮಪತ್ರವನ್ನು ಅಕ್ಟೋಬರ್ 9ರಂದು ಅವರು ಸಲ್ಲಿಸಲಿದ್ದಾರೆ ಎಂದು ಲಾಲೂ ಇದೇ ಸಂದರ್ಭದಲ್ಲಿ ತಿಳಿಸಿದರು.
ಅದೇ ಹೊತ್ತಿಗೆ ಆಡಳಿತ ಪಕ್ಷ ಜೆಡಿಯುವಿನಿಂದ ಆರ್‌ಜೆಡಿಗೆ ವಲಸೆ ಹೋಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜೆಡಿಯು ಅಲ್ಪಸಂಖ್ಯಾತರ ಘಟಕವನ್ನು ಪಕ್ಷದ ರಾಜ್ಯಾಧ್ಯಕ್ಷ ವಿಜಯ್ ಕುಮಾರ್ ಚೌದರಿಯವರು ವಿಸರ್ಜನೆಗೊಳಿಸಿದ ಬೆನ್ನಿಗೆ ಅದರ ಅಧ್ಯಕ್ಷರಾಗಿದ್ದ ಮೊಹಮ್ಮದ್ ಅಬು ತಾಲಿಬ್ ರೆಹಮಾನಿಯವರು ಲಾಲೂ ಪಕ್ಷವನ್ನು ಸೇರಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರೆಹಮಾನಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಅಲ್ಪಸಂಖ್ಯಾತರನ್ನು ತಮ್ಮ ವೋಟ್ ಬ್ಯಾಂಕ್‌ಗಾಗಿ ಬಳಸಿಕೊಂಡಿದ್ದಾರೆ. ಕನಿಷ್ಠ 25 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಮಾಡಲಾಗಿದ್ದ ಮನವಿಯನ್ನೂ ಅವರು ತಿರಸ್ಕರಿಸಿದ್ದಾರೆ. ಪಕ್ಷದ ಸಂಸದೀಯ ಸಮಿತಿಗೆ ಮುಸ್ಲಿಂ ನಾಯಕನೊಬ್ಬನನ್ನು ಸದಸ್ಯರನ್ನಾಗಿ ನೇಮಿಸಲು ಕೂಡ ಅವರು ಹಿಂದೇಟು ಹಾಕಿದ್ದಾರೆ ಎಂದು ರೆಹಮಾನಿ ಆರೋಪಿಸಿದ್ದಾರೆ.