ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನಗಿಂತ ಪ್ರಧಾನಿ ಸಿಂಗ್ ಹೆಚ್ಚು ದಕ್ಷರು: ರಾಹುಲ್ ಗಾಂಧಿ (Rahul Gandhi | Manmohan Singh | Bhopal | Congress)
Bookmark and Share Feedback Print
 
ತನಗಿಂತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೆಚ್ಚು ಅರ್ಹತೆಯುಳ್ಳವರು ಎಂದು ಬಣ್ಣಿಸಿರುವ 'ಸರದಿಯಲ್ಲಿರುವ ಪ್ರಧಾನಿ' ಖ್ಯಾತಿಯ ರಾಹುಲ್ ಗಾಂಧಿ, ತನ್ನ ರಾಜಕೀಯ ಭವಿಷ್ಯದ ಕುರಿತ ಪ್ರಶ್ನೆಗಳಿಗೆ ಕಾದು ನೋಡುವ ಉತ್ತರಗಳನ್ನಷ್ಟೇ ನೀಡಿದ್ದಾರೆ.

ಪ್ರಧಾನ ಮಂತ್ರಿ ಹುದ್ದೆಗೆ ಯುವಕನೊಬ್ಬ ಏರುವ ಸಾಧ್ಯತೆಗಳ ಪ್ರಶ್ನೆ ಬಂದಾಗ, ಅದನ್ನು ಈಗಲೇ ಹೇಳಲಾಗದು. ಇಂತಹ ಪ್ರಶ್ನೆಗಳನ್ನು ನೀವುಗಳು ಸುದೀರ್ಘಾವಧಿಯಿಂದ ಕೇಳುತ್ತಾ ಬಂದಿದ್ದೀರಿ ಎಂದು ಹೇಳುವ ಮೂಲಕ ಪ್ರತಿಯೊಬ್ಬರೂ ಹೇಗೆ ಬೇಕಾದರೂ ತಿಳಿದುಕೊಳ್ಳಬಹುದು ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದರು.

ನಾವು ಶ್ರೇಷ್ಠ ಸಮರ್ಥ ಪ್ರಧಾನ ಮಂತ್ರಿಯನ್ನು ಹೊಂದಿದ್ದೇವೆ. ಅವರು ನನಗಿಂತ ಹೆಚ್ಚು ದಕ್ಷ ಮತ್ತು ಸಮರ್ಥರು. ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐಗಳು ನನ್ನ ಹೊಣೆಗಾರಿಕೆಗಳು. ಅದನ್ನು ನಾನು ಮಾಡುತ್ತಿದ್ದೇನೆ ಎಂದು ರಾಹುಲ್ ಅಭಿಪ್ರಾಯಪಟ್ಟರು.

ತಾನು ಪ್ರಧಾನಿಯಾಗುವ ಸಾಧ್ಯತೆಗಳ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಅವರು, ಭವಿಷ್ಯದ ಬಗ್ಗೆ ಯಾರು ಏನಾದರೂ ಹೇಳಲು ಸಾಧ್ಯವಿದೆಯೇ? ನಾಳೆ ಏನೂ ಆಗಬಹುದು ಎಂದರು.

ಅದೇ ಹೊತ್ತಿಗೆ ಪಕ್ಷದ ನಾಯಕರು ವಿವಿಧ ವಿಚಾರಗಳ ಕುರಿತು ಹೇಳಿಕೆಗಳನ್ನು ನೀಡುವಾಗ ಜಾಗರೂಕತೆ ವಹಿಸಬೇಕು, ಪಕ್ಷದ ನಿಯಮಗಳು, ಸಿದ್ಧಾಂತಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಕಾಂಗ್ರೆಸ್ ಪಕ್ಷದ ಚರ್ಚೆಗಳು ಮತ್ತು ಸಮೂಹ ವಿಚಾರಗಳ ಕುರಿತು ನಾನು ಒಂದು ವಿಷಯವನ್ನು ಹೇಳಲು ಬಯಸುತ್ತಿದ್ದೇನೆ. ನಮ್ಮ ಪಕ್ಷವು ಒಂದು ಹಂತದವರೆಗೆ ಮುಕ್ತ ವೇದಿಕೆಯನ್ನು ಹೊಂದಿದ್ದು, ಚರ್ಚೆಗಳಿಗೆ ಅವಕಾಶ ನೀಡುತ್ತದೆ. ಆದರೆ ಸಮಸ್ಯೆಗಳು ಉದ್ಭವಿಸುವುದು ಪಕ್ಷದ ದೃಷ್ಟಿಕೋನ ಮತ್ತು ರೇಖೆಯನ್ನು ಮೀರುವ ಹೇಳಿಕೆಗಳು ಹೊರ ಬಂದಾಗ. ಇದಕ್ಕೆ ಯಾರು ಕೂಡ ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹಲವು ವಿಚಾರಗಳಲ್ಲಿ ವಿವಿಧ ನಾಯಕರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಕಾಂಗ್ರೆಸ್ ಹೈಕಮಾಂಡಿಗೆ ಮುಜುಗರ ಹುಟ್ಟಿಸಿದ್ದರು. ಇದನ್ನೇ ರಾಹುಲ್ ಪ್ರಸ್ತಾಪಿಸಿದರಾದರೂ, ಯಾವ ನಾಯಕರನ್ನೂ ಬೆಟ್ಟು ಮಾಡಿ ತೋರಿಸಲಿಲ್ಲ.

ಜತೆಗೆ ತನ್ನ ಜವಾಬ್ದಾರಿ ಏನು ಎಂಬುದನ್ನೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯನ್ನು ಹೊಂದಿಲ್ಲ. ನನ್ನ ಹೊಣೆಗಾರಿಕೆ ಇರುವುದು ಯುವ ಕಾಂಗ್ರೆಸ್‌ನಲ್ಲಿ. ಇದಕ್ಕಾಗಿ ನಾನು ನನ್ನ ಗಮನವನ್ನು ಹರಿಸುತ್ತಿದ್ದೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ