ಗಲ್ಲು ಖಚಿತ; ಮೊದಲು ವಾದಿಸುತ್ತಿರುವುದಕ್ಕೆ ಕಸಬ್ ಆಕ್ಷೇಪವಿಲ್ಲ
ಮುಂಬೈ, ಗುರುವಾರ, 7 ಅಕ್ಟೋಬರ್ 2010( 10:54 IST )
166 ಮಂದಿಯ ಸಾವಿಗೆ ಕಾರಣವಾದ 2008ರ ಮುಂಬೈ ದಾಳಿಗಾಗಿ ಮರಣ ದಂಡನೆಯನ್ನು ಪಡೆದುಕೊಂಡಿರುವ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್ ಶಿಕ್ಷೆಯನ್ನು ಖಚಿತಗೊಳಿಸಲು ಸರಕಾರವು ಮೊದಲು ತನ್ನ ವಾದ ಮಂಡನೆ ಆರಂಭಿಸಲು ಯಾವುದೇ ಆಕ್ಷೇಪವಿಲ್ಲ ಎಂದು ಪಾಕಿಸ್ತಾನಿ ಭಯೋತ್ಪಾದಕ ಹೇಳಿಕೊಂಡಿದ್ದಾನೆ.
ಆತನಿಗೆ ನೀಡಲಾಗಿರುವ ಮರಣ ದಂಡನೆಯನ್ನು ಖಾತರಿಪಡಿಸುವ ಸಂಬಂಧ ಬಾಂಬೆ ಹೈಕೋರ್ಟ್ ಆರಂಭಿಸುವ ವಿಚಾರಣೆಯಲ್ಲಿ ಸರಕಾರವು ಮೊದಲು ವಾದ ಮಂಡಿಸುವುದಾದರೆ ತನ್ನ ಆಕ್ಷೇಪವಿಲ್ಲ ಎಂದು ಕಸಬ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎಂದು ಆತನ ವಕೀಲೆ ಫರ್ಹಾನಾ ಶಾ ತಿಳಿಸಿದರು.
ಅದೇ ಹೊತ್ತಿಗೆ ತಪ್ಪಿತಸ್ಥ ಮತ್ತು ಮರಣ ದಂಡನೆ ಶಿಕ್ಷೆಯನ್ನು ಪಡೆದುಕೊಂಡಿರುವ ಕಸಬ್, ಅದನ್ನು ಪ್ರಶ್ನಿಸುವ ವಿಚಾರಣೆಯು ಮರಣ ದಂಡನೆ ಖಚಿತಪಡಿಸುವ ವಿಚಾರಣೆಗಿಂತ ಮೊದಲು ನಡೆಯಬೇಕು ಎಂದು ಅತ್ತ ಸರಕಾರಿ ವಕೀಲ ಉಜ್ವಲ್ ನಿಕ್ಕಂ ಮನವಿ ಮಾಡಿಕೊಂಡರು.
ಆತ ಮಾಡಿಕೊಂಡ ಮೇಲ್ಮನವಿ ವಿಫಲವಾದರೆ ಮಾತ್ರ ನಂತರ ಮರಣ ದಂಡನೆ ಖಚಿತಪಡಿಸುವ ವಿಚಾರಣೆಯನ್ನು ನಡೆಸಲಾಗುತ್ತದೆ. ಹಾಗಾಗಿ ಮರಣ ದಂಡನೆ ಖಚಿತಪಡಿಸುವ ವಿಚಾರಣೆಯನ್ನು ನಂತರ ನಡೆಸಬೇಕು ಎಂದು ಕೇಳಿಕೊಂಡರು.
ಈ ಸಂಬಂಧ ಲಿಖಿತ ಮನವಿಯನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ, ಪ್ರಕರಣವನ್ನು ಗುರುವಾರ ವಿಚಾರಣೆಗೆ ಸ್ವೀಕರಿಸುವುದಾಗಿ ಹೇಳಿದೆ.
ಸಿಆರ್‌ಪಿಸಿ ನಿಯಮಾವಳಿಗಳ ಪ್ರಕಾರ ಆರೋಪಿಯೊಬ್ಬ ವಿಚಾರಣಾ ನ್ಯಾಯಾಲಯದಲ್ಲಿ ಮರಣ ದಂಡನೆ ಶಿಕ್ಷೆಯನ್ನು ಪಡೆದುಕೊಂಡರೆ, ನಂತರ ಹೈಕೋರ್ಟಿನಲ್ಲಿ ಈ ಶಿಕ್ಷೆಯನ್ನು ಖಚಿಪಡಿಸುವ ಸಂಬಂಧ ವಿಚಾರಣೆ ನಡೆಯುತ್ತದೆ.
ಕಸಬ್ ಮರಣ ದಂಡನೆ ಖಚಿತಪಡಿಸುವುದು ಮತ್ತು ಆರೋಪಿಯ ಮೇಲ್ಮನವಿಯನ್ನು ಏಕಕಾಲದಲ್ಲಿ ವಿಚಾರಣೆ ನಡೆಸುವ ಕುರಿತು ಕೂಡ ನ್ಯಾಯಮೂರ್ತಿಗಳು ಇದೇ ಸಂದರ್ಭದಲ್ಲಿ ಸುಳಿವು ನೀಡಿದ್ದಾರೆ.
ಕಸಬ್ ಮೇಲೆ ಹೇರಲಾಗಿರುವ ಮರಣ ದಂಡನೆ ಶಿಕ್ಷೆಯನ್ನು ಖಚಿತಪಡಿಸುವ ಕುರಿತು ಅಕ್ಟೋಬರ್ 18ರಿಂದ ಪ್ರತಿದಿನ ವಿಚಾರಣೆ ಆರಂಭಿಸಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಜತೆಗೆ ಕಸಬ್ ಪ್ರತಿದಿನ ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗುವ ಅಗತ್ಯವಿಲ್ಲ. ಆತನನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.